ಯಾದಗಿರಿ:ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಹಠಾತ್ ನಿಧನದಿಂದ ತಾಲೂಕಿನ ಜನತೆಗೆ ದಿಗ್ಬ್ರಮೆ ಆಗಿದೆ. ಅವರು ಕಾಂಗ್ರೆಸ್ ಪಕ್ಷದ ಕಟ್ಟಾಳುಗಳಾಗಿ, ಡಾ. ಮಲ್ಲಿಕಾರ್ಜುನ ಖರ್ಗೆ ಅವರ ಆಪ್ತರಾಗಿ ಗುರುತಿಸಿಕೊಂಡಿದ್ದರು. ಸುರಪುರ ಕ್ಷೇತ್ರದ ಅಭಿವೃದ್ಧಿ ಕನಸನ್ನು ಕಂಡವರು. ಕಾಂಗ್ರೆಸ್ ಕಾರ್ಯಕರ್ತರ ಪಾಲಿಗೆ ರಾಜಾಸಾಹೇಬ್ ಅಂತ ಹೆಸರು ಪಡೆದಿದ್ದರು. ಇಡೀ ಕ್ಷೇತ್ರ ದುಃಖದಲ್ಲಿ ಮುಳುಗಿದೆ ಎಂದು ಮಾಜಿ ಜಿಪಂ ಸದಸ್ಯ ರಾಜಶೇಖರ್ ಪಾಟೀಲ್ ವಜ್ಜಲ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಬೆಂಗಳೂರು ನಗರದ ಮಣಿಪಾಲ್ ಆಸ್ಪತ್ರೆಯಿಂದ ಭಾನುವಾರ ಸಂಜೆ ಸುರಪುರ ನಗರದತ್ತ ಅಂಬ್ಯುಲೆನ್ಸ್ ಹೊರಟಿದ್ದು, ಮಧ್ಯರಾತ್ರಿ 3 ಗಂಟೆಗೆ ತಲುಪುವ ನಿರೀಕ್ಷೆಯಿದೆ. ಅವರ ಕುಟುಂಬದ ಸಲಹೆ ಮೇರೆಗೆ ನಗರದ ಶ್ರೀ ಪ್ರಭು ಕಾಲೇಜು ಮಹಾವಿದ್ಯಾಲಯದಲ್ಲಿ ಸೋಮವಾರ ಬೆಳಗಿನಿಂದ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಿದ್ದೇವೆ. ನಂತರ ನಗರದ ಹೊಸಬಾವಿ ಹತ್ತಿರವಿರುವ ಅರಸು ಮನೆತನದ ರುದ್ರಭೂಮಿಯಲ್ಲಿ ಸಂಜೆ 5 ಗಂಟೆಗೆ ಸರ್ಕಾರದ ನಿಯಮದ ಪ್ರಕಾರ ಅಂತಿಮ ವಿಧಿವಿಧಾನಗಳು ನೆರವೇರಲಿವೆ ಎಂದು ಮಾಹಿತಿ ನೀಡಿದರು.
ಸ್ವಯಂ ಪ್ರೇರಿತ ಬಂದ್:ಶಾಸಕರ ಸಾವಿನ ಸುದ್ದಿ ನಗರದಲ್ಲಿ ಎಲ್ಲೆಡೆ ಹಬ್ಬುತ್ತಿದ್ದಂತೆ ಅಂಗಡಿ, ಹೋಟೆಲ್ ಮಾಲೀಕರು ಸ್ವಯಂ ಪೇರಿತವಾಗಿ ಬಂದ್ ಮಾಡಿದರು. ನಗರದಲ್ಲಿ ಎಲ್ಲೆಡೆ ಮೌನ ಆವರಿಸಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.