ಗಂಗಾವತಿ (ಕೊಪ್ಪಳ) :ಮಾಜಿ ಸಚಿವ ಶ್ರೀರಾಮುಲು ಬಗ್ಗೆ ನಾನು ಮಾಡಿರುವ ಟೀಕೆ-ಟಿಪ್ಪಣಿಗಳೆಲ್ಲವೂ ವೈಯಕ್ತಿಕ. ವಾಲ್ಮೀಕಿ ನಾಯಕ ಸಮುದಾಯಕ್ಕೆ ಯಾವುದೇ ನೋವು ಉಂಟು ಮಾಡುವ ರೀತಿಯಲ್ಲಿ ನಾನು ಮಾತನಾಡಿಲ್ಲ. ಇದು ಸಮಾಜಕ್ಕೆ ಮನವರಿಕೆಯಾಗಬೇಕಿತ್ತು ಎಂದು ಶಾಸಕ ಜನಾರ್ದನರೆಡ್ಡಿ ಹೇಳಿದರು.
ಈ ಬಗ್ಗೆ ಮಾತನಾಡಿದ ಅವರು, ರಾಮುಲು ಬಗ್ಗೆ ಸಾರ್ವಜನಿಕ, ಬಹಿರಂಗವಾಗಿ ಮತ್ತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದಂತೆ ಪಕ್ಷದ ಹಿರಿಯ ನಾಯಕರು ಸೂಚನೆ ನೀಡಿದ್ದಾರೆ. ಅವರ ಅಣತಿಯಂತೆ ನಡೆದುಕೊಳ್ಳುವೆ. ಆದರೆ, ರಾಮುಲು ವಿಚಾರವಾಗಿ ಯಾರಿಗೆ, ಎಲ್ಲಿ ಹೇಳಬೇಕಿತ್ತೋ, ಏನು ದೂರು ನೀಡಬೇಕಿತ್ತೋ ಅದನ್ನು ಮಾಡಿದ್ದೀನಿ. ಮುಂದಿನದ್ದು ಪಕ್ಷದ ಹಿರಿಯ ನಾಯಕರು ಚರ್ಚಿಸಿ ಸೂಕ್ತ ನಿರ್ಧಾರ ತಾಳುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ರಾಮುಲು ಅವರ ವಿಚಾರವನ್ನು ಕೈಗೆತ್ತಿಕೊಂಡಿದ್ದಕ್ಕೆ ವಾಲ್ಮೀಕಿ ಸಮಾಜ ನಿಮ್ಮ ವಿರುದ್ಧ ಹರಿಹಾಯುತ್ತಿದೆಯಲ್ಲ? ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರೆಡ್ಡಿ, ರಾಮುಲು - ರೆಡ್ಡಿಯ ಮಧ್ಯ ಇರುವ ಮನಸ್ತಾಪ ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿರುವುದು ಎಂಬುವುದು ಆ ಸಮಾಜದ ನಾಯಕರಿಗೆ ಮನವರಿಕೆಯಾಗಬೇಕಿತ್ತು. ಈ ಬಗ್ಗೆ ನಾನು ಮಾತನಾಡಲಾರೆ, ಪಕ್ಷದ ಚೌಕಟ್ಟು ಮೀರಿ ಹೋಗಲಾರೆ. ಪಕ್ಷದ ನಾಯಕರಿಗೆ ಈ ವಿಚಾರ ಎಲ್ಲಾ ಗೊತ್ತಿದೆ. ಇದನ್ನು ಅವರೇ ಇತ್ಯರ್ಥ ಮಾಡುತ್ತಾರೆ. ಅಲ್ಲಿವರೆಗೂ ನಾನು ಮಾತನಾಡಲಾರೆ ಎಂದರು.