ಬೆಳಗಾವಿ: ನನ್ನ ಪ್ರತಿಷ್ಠೆ ಹೆಚ್ಚಿಸಲು ಹೋರಾಟ ಮಾಡುತ್ತಿದ್ದೇನೆ. ಇದರಲ್ಲಿ ನನ್ನದು ಸ್ವಾರ್ಥವಿದೆ. ನಾನೇನು ನಿಸ್ವಾರ್ಥ ತ್ಯಾಗಿ, ಸನ್ಯಾಸಿ ಅಲ್ಲ. ನಾನು ಏನಾದರು ಆಗಬೇಕೆಂದು ಹೋರಾಟ ಮಾಡುತ್ತಿದ್ದೇನೆ. ಮುಂದೆ ಕರ್ನಾಟಕದಲ್ಲಿ ನಾನು ನಂ.1 ಆಗುತ್ತೇನೆ. ನಾನು ಮುಖ್ಯಮಂತ್ರಿ ಆದ ಬಳಿಕ ಮಾಧ್ಯಮಗಳೇ ನನ್ನ ಬಳಿ ಬರುತ್ತವೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ವಕ್ಫ್ ವಿರುದ್ಧ ಜನ ಜಾಗೃತಿಯನ್ನು ನಾವು ಮಾಡುತ್ತಿದ್ದೇವೆ. ಕಲ್ಯಾಣ ಕರ್ನಾಟಕ ಮುಗಿಸಿ ಕಿತ್ತೂರು ಕರ್ನಾಟಕ ಪ್ರವೇಶಿಸಿದ್ದೇವೆ. ನಾಳೆ ಸಂಜೆ ನಾವೆಲ್ಲ ದೆಹಲಿಗೆ ಹೋಗುತ್ತಿದ್ದೇವೆ. ಇಲ್ಲಿಯವರೆಗೂ ಮಠ, ಮಂದಿರ ವಕ್ಫ್ ಆಸ್ತಿ ಅಂತ ಆಗಿವೆ. ಅದರ ಬಗ್ಗೆ ವರದಿ ಕೊಡುತ್ತೇವೆ. ಜಂಟಿ ಸದನ ಸಮಿತಿ ಸದಸ್ಯರನ್ನು ಭೇಟಿಯಾಗಿ ಮನವಿ ಮಾಡುತ್ತೇವೆ. ಅಷ್ಟಕ್ಕೆ ಮಾತ್ರ ನಮ್ಮ ಪ್ರವಾಸವಿದೆ ಎಂದರು.
ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ ಯತ್ನಾಳ (ETV Bharat) ನಮ್ಮ ಸಮುದಾಯದ ಮೀಸಲಾತಿ ಹೋರಾಟಕ್ಕೆ ಸರ್ಕಾರದಿಂದ ಬೆದರಿಕೆ ಹಾಕುವ ಕೆಲಸ ಆಗುತ್ತಿದೆ. ನಮ್ಮ ಹೋರಾಟಕ್ಕೆ ಏನಾದರೂ ತೊಂದರೆ, ಅನಾಹುತ ಆದರೆ ಅದಕ್ಕೆ ಸಿದ್ದರಾಮಯ್ಯ ಅವರ ಸರ್ಕಾರವೇ ಹೊಣೆಯಾಗುತ್ತದೆ ಎಂದು ಯತ್ನಾಳ ಎಚ್ಚರಿಕೆ ನೀಡಿದರು.
ಯತ್ನಾಳ ವಿರುದ್ಧ ದೂರು ಕೊಟ್ಟಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾವು ಯಡಿಯೂರಪ್ಪ ಕುಟುಂಬದ ಬಗ್ಗೆ ಏನೂ ಮಾತಾಡಿಲ್ಲ. ಯಾವುದೇ ಗೊಂದಲ ಇಲ್ಲ. ನಾವು ವಕ್ಫ್ ಬಗ್ಗೆ ಮಾತನಾಡೋದು ತಪ್ಪಾ? ವಕ್ಫ್ ಇಡೀ ದೇಶದ ಕ್ಯಾನ್ಸರ್ ಪಿಡುಗು. ಜಮೀರ್ ಅಹಮ್ಮದ್ ಖಾನ್ ಹಚ್ಚಿದ ಬೆಂಕಿ ಇದು. 1.15 ಲಕ್ಷ ಎಕರೆ ಎಂದಿದ್ದ ಸಚಿವರು ಈಗ 6 ಲಕ್ಷ ಎಕರೆ ಕ್ಲೈಮ್ ಮಾಡುತ್ತಿದ್ದಾರೆ. ಬೇರೆ ಯಾರ ಬಗ್ಗೆ ಮಾತನಾಡಲು ನಮಗೇನು ಕೆಲಸ ಇಲ್ವಾ ಎಂದು ಪ್ರಶ್ನಿಸಿದರು.
ದೆಹಲಿಯಿಂದ ಬಂದ ಬಳಿಕ ಎರಡನೇ ಹಂತದ ಹೋರಾಟ ನಡೆಯಲಿದೆ. ಚಿಕ್ಕಬಳ್ಳಾಪುರದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಘಟನೆ ನಡೆದಿದೆ. ಇಲ್ಲಿಗೆ ನಾವು ಇದನ್ನು ಬಿಡುವುದಿಲ್ಲ. ಬಹಳಷ್ಟು ಕಾಂಗ್ರೆಸ್ ನಾಯಕರು ಉಪ ಚುನಾವಣೆ ಬಳಿಕ ವಕ್ಫ್ ಹೋರಾಟ ಇರಲ್ಲ ಎಂದಿದ್ದರು. ಈಗ ಯಾವ ಚುನಾವಣೆ ಇದೆ ಹೇಳಿ ಎಂದು ಯತ್ನಾಳ ಪ್ರಶ್ನಿಸಿದರು.
ಬಸವಣ್ಣನವರ ಅನುಭವ ಮಂಟಪ ಪೀರಬಾಷಾ ದರ್ಗಾ ಆಗಿದೆ. ಅದರ ಬಗ್ಗೆ ಸ್ವಾಮೀಜಿ ಮಾತನಾಡಲಿ. ಈಗಾಗಲೇ ಈ ಬಗ್ಗೆ ಆಂದೋಲನ ಸ್ವಾಮೀಜಿ ಹೋರಾಟ ಮಾಡುತ್ತೇವೆ ಎಂದು ಹೇಳಿದ್ದಾರೆ. ಹಾಗಾಗಿ, ಅಲ್ಲಿ ಅಯೋಧ್ಯೆ ಮಾದರಿಯಲ್ಲಿ ಹೋರಾಟ ಮಾಡಿ, ಹೇಗೆ ಪ್ರಭು ಶ್ರೀರಾಮಚಂದ್ರರ ಮಂದಿರ ನಿರ್ಮಾಣ ಆಗಿದೆಯೋ, ಅದೇ ರೀತಿ ಈಗಿನ ಬಸವ ಕಲ್ಯಾಣದಲ್ಲಿ ಪೀರಬಾಷಾ ಜಾಗದಲ್ಲಿ ಭವ್ಯ ಅನುಭವ ಮಂಟಪ ಪುನರ್ ನಿರ್ಮಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ವಕ್ಫ್ ಕ್ಯಾನ್ಸರ್ ಇದ್ದಂತೆ, ಭೂಮಿ ಕಬಳಿಸಲು ಬಿಜೆಪಿ ಬಿಡುವುದಿಲ್ಲ: ಅರವಿಂದ ಲಿಂಬಾವಳಿ