ಶಿರಸಿ (ಉತ್ತರ ಕನ್ನಡ): ''ನಾನು ಮತ್ತು ಸೋಮಶೇಖರ್ ಬಿಜೆಪಿ, ಕಾಂಗ್ರೆಸ್ ಯಾವ ಪಕ್ಷದಲ್ಲೂ ಇಲ್ಲ. ನಮ್ಮದು ಕರ್ನಾಟಕ ಶಾಸಕಾಂಗ ಪಕ್ಷ. ನನ್ನ ರಾಜೀನಾಮೆ ಕೇಳುವ ಹಕ್ಕು ಬಿಜೆಪಿಗೆ ಇಲ್ಲ. ಬೇಕಿದ್ದಲ್ಲಿ ಉಚ್ಚಾಟನೆ ಮಾಡಲಿ'' ಎಂದು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ವರದಾ ನದಿಯಿಂದ ನಿರ್ಮಾಣವಾದ ಪ್ರವಾಹವನ್ನು ಇಂದು ಗಮನಿಸಿ, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಈ ಹಿಂದೆ ರಾಜೀನಾಮೆ ಕೊಟ್ಟೇ ಚುನಾವಣೆ ಎದುರಿಸಿ ಬಂದವನು. ರಾಜೀನಾಮೆ ಬಗ್ಗೆ ಬೇರೆಯವರ ಉಪದೇಶ ಬೇಕಿಲ್ಲ. ಆಗ ನಾನು ರಾಜೀನಾಮೆ ಕೊಟ್ಟು ಬಂದಾಗ ಕಾಂಗ್ರೆಸ್ಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿಗೆ ಎನಿಸಲಿಲ್ಲವೇ? ಅಧಿಕಾರಕ್ಕೆ ಬರೋವಾಗ ಏನು ಅನ್ಸಿಲ್ವಾ ಬಿಜೆಪಿಗೆ ? ಈಗ್ಯಾಕೆ ಹೀಗೆ ಅನ್ಸುತ್ತೆ? ಎಂದು ಪ್ರಶ್ನಿಸಿದರು.
ಅವಶ್ಯಕತೆ ಬಿದ್ದಾಗ ಮತ್ತೆ ರಾಜೀನಾಮೆ ಕೊಡುತ್ತೇನೆ. ಅದಕ್ಕೂ ನಾನು ಹೆದರಲ್ಲ. ನನ್ನ ಕ್ಷೇತ್ರದ ಜನರ ಮೇಲೆ ವಿಶ್ವಾಸವಿದೆ. ಆದರೆ ನಾವೇನು ಉಚ್ಚಾಟನೆ ಮಾಡೋದು ಬೇಡ ಅಂತಾ ಅರ್ಜಿ ಕೊಟ್ಟಿದ್ದೀವಾ? ನಮ್ಮ ನಡುವಳಿಕೆ ಅವರಿಗೆ ಸಮಾಧಾನ ಇಲ್ಲ ಎಂದರೆ ಅವರೇ ತೀರ್ಮಾನ ಮಾಡುತ್ತಾರೆ. ಇಂಥದ್ದೇ ನಿರ್ಣಯ ತೆಗೆದುಕೊಳ್ಳಿ ಅನ್ನೋಕೆ ನಾನ್ಯಾರು?. ಸರ್ಕಾರ ಬರಲು ಕಾರಣರಾದವರು, ಸ್ಪೀಕರ್ ಆಗಲು ಕಾರಣರಾದವರು ಯಾರೂ ಬಿಜೆಪಿಗೆ ಕಾಣುತ್ತಿಲ್ಲ. ಎಲ್ಲ ಆಗಿ ಆಯ್ತು, ಅನುಭವಿಸಿ ಆಯ್ತು. ದೋಣಿ ದಾಟಿದ ಮೇಲೆ ದೋಣಿಗಾರನ ಅವಶ್ಯಕತೆ ಇಲ್ಲ ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಶಾಸನ ಸಭೆಯಲ್ಲಿ ಬಿಜೆಪಿಯವರಿಗೆ ನನ್ನ ಜೊತೆ ಗುರುತಿಸಿಕೊಳ್ಳಲು ಮುಜುಗರ ಆದರೆ ಅದು ಅವರಿಗೆ ಬಿಟ್ಟದ್ದು. ನನ್ನನ್ನು ಯಾವುದೇ ಪ್ರತಿಭಟನೆಗೆ ಕರೆದಿಲ್ಲ. ನಾನು ಮತ್ತು ಸೋಮಶೇಖರ್ ಬಿಎಲ್ಪಿಗೂ ಹೋಗ್ತಿಲ್ಲ. ಸಿಎಲ್ಪಿಗೂ ಹೋಗ್ತಿಲ್ಲ. ನಮ್ದು ಕೆಎಲ್ಪಿ, ಕರ್ನಾಟಕ ಲೆಜೆಸ್ಲೇಟಿವ್ ಪಾರ್ಟಿ ಎಂದರು.