ಸಿಗರೇಟ್ ವಿತರಕನಿಂದ ₹15 ಲಕ್ಷ ದರೋಡೆ ಬೆಂಗಳೂರು:ಸಿಗರೇಟ್ ವಿತರಕನನ್ನು ಹಿಂಬಾಲಿಸಿಕೊಂಡು ಬಂದ ಮೂವರು ದರೋಡೆಕೋರರು ಪಿಸ್ತೂಲ್ ತೋರಿಸಿ, ಕರಿಮೆಣಸಿನ ಪುಡಿ ಎರಚಿ 15 ಲಕ್ಷ ರೂ ದರೋಡೆ ಮಾಡಿ ಪರಾರಿಯಾದ ಘಟನೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ.
ಟಾಟಾ ಏಸ್ ವಾಹನದಲ್ಲಿದ್ದ ಎಂಬಿ ಡಿಸ್ಟ್ರಿಬ್ಯೂಟರ್ ಏಜೆಂಟ್ ಗೋಪಾಲ್ ಎಂಬವರು ಕೆಂಗೇರಿಯಿಂದ ಸಿಗರೇಟ್ ಬಿಲ್ ಸಂಗ್ರಹಿಸಿಕೊಂಡು ಬರುತ್ತಿದ್ದರು. ನಾಗರಭಾವಿ ಪಾಪರೆಡ್ಡಿ ಪಾಳ್ಯಕ್ಕೆ ಬಂದಿದ್ದ ಅವರು, ನಾತೂರಾಮ್ ಎಂಬವರ ಅಂಗಡಿ ಬಳಿ ಸಿಗರೇಟ್ ಬಿಲ್ ಸಂಗ್ರಹಿಸಲು ಮುಂದಾಗಿದ್ದರು. ಈ ವೇಳೆ ಡಿಯೋ ಬೈಕ್ನಲ್ಲಿ ಆಗಮಿಸಿದ ಮೂವರು ಗೋಪಾಲ್ ಅವರನ್ನು ಸುತ್ತುವರೆದಿದ್ದಾರೆ.
ಈ ಮೂವರ ಪೈಕಿ ಇಬ್ಬರು ಪೆಪ್ಪರ್ ಸ್ಪ್ರೇ ಎರಚಿದರೆ, ಮತ್ತೊಬ್ಬ ಪಿಸ್ತೂಲ್ ತೋರಿಸಿದ್ದಾನೆ. ನಂತರ ಮತ್ತಿಬ್ಬರು ಕತ್ತಿ ಬೀಸಿ ಪ್ರಾವಿಜನ್ ಸ್ಟೋರ್ ಒಳಗೆಲ್ಲ ಗೋಪಾಲ್ ಅವರನ್ನು ಅಟ್ಟಾಡಿಸಿದ್ದಾರೆ. ಲಾಂಗ್ ಬೀಸಿದ ರಭಸಕ್ಕೆ ಹಣವಿದ್ದ ಬ್ಯಾಗ್ ತುಂಡಾಗಿದೆ. ಕೂಡಲೇ ಹಣವಿದ್ದ ಬ್ಯಾಗ್ ಹೊತ್ತು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಅನ್ನಪೂರ್ಣೇಶ್ವರಿ ನಗರ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚಿನ ಪ್ರಕರಣ: ಜನವರಿ 11ರಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗ ಸಮೀಪ ಸಾಲುಮರದ ಟ್ರೀಪಾರ್ಕ್ ಮುಂಭಾಗದ ಮನೆಯೊಂದಕ್ಕೆ ಬೆಳಿಗ್ಗೆ ಪ್ರವೇಶಿಸಿದ ನಾಲ್ವರು ಖದೀಮರು, ಮನೆಯಲ್ಲಿದ್ದ ಮಹಿಳೆಯರನ್ನು ಚಾಕುವಿನಿಂದ ಹೆದರಿಸಿ ಬಂಗಾರ, ನಗದು ಸಹಿತ ಸುಮಾರು 3 ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ಸೊತ್ತುಗಳನ್ನು ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿದ್ದರು.
ಈ ಕುರಿತು ಮಾಹಿತಿ ನೀಡಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ''ಕಾರ್ಕಳ ತಾಲೂಕಿನ ಮಾಳ ಗ್ರಾಮದ ಗಣೇಶ ನಾಯ್ಕ (26), ದಿನೇಶ್ ನಾಯ್ಕ (22), ಸಾಗರ ಶೆಟ್ಟಿ (21), ಕಡಬ ಬೆಳ್ಳಂದೂರು ಗ್ರಾಮದ ಎಂ. ಸೀತಾರಾಮ ಯಾನೆ ಪ್ರವೀಣ್ (36), ಮಂಗಳೂರು ಐಕಳ ಗ್ರಾಮದ ರಾಕೇಶ್ ಎಲ್. ಪಿಂಟೋ (29), ಸುಧೀರ್ (29) ಹಾಗೂ ದರೋಡೆಗೈದ ಚಿನ್ನಾಭರಣ ಸ್ವೀಕರಿಸಿದ್ದ ಬಂಟ್ವಾಳ ತಾಲೂಕಿನ ಇರಾ ಗ್ರಾಮದವನಾದ ಪ್ರಸ್ತುತ ಚಿಕ್ಕಮಗಳೂರಿನ ಗೌರಿ ಕಾಲುವೆಯ ನಿವಾಸಿ ಮಹಮ್ಮದ್ ಹನೀಫ್ (49) ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ. 3,15,000 ರೂಪಾಯಿ ಮೌಲ್ಯದ ಚಿನ್ನಾಭರಣ, 8 ಲಕ್ಷ ರೂಪಾಯಿ ಮೌಲ್ಯದ ಇನ್ನೋವಾ ಕಾರು, 2 ಲಕ್ಷ ರೂಪಾಯಿ ಮೌಲ್ಯದ ಟಾಟಾ ಇಂಡಿಕಾ ಕಾರು ಜಪ್ತಿ ಮಾಡಲಾಗಿದೆ'' ಎಂದು ತಿಳಿಸಿದ್ದರು.
ಇದನ್ನೂ ಓದಿ:ಬೆಂಗಳೂರಲ್ಲಿ ಬಿಐಎಸ್ ಅಧಿಕಾರಿಗಳ ಸೋಗಿನಲ್ಲಿ ನಕಲಿ ದಾಳಿ: ಸಿನಿಮೀಯ ಮಾದರಿಯಲ್ಲಿ ಆರೋಪಿಗಳ ಬಂಧನ