ಬೆಳಗಾವಿ :ಹಿಂದಿನ 2019ರ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಬಹಳಷ್ಟು ಕ್ಷೇತ್ರ ಗೆಲ್ಲುವ ಅವಕಾಶವಿದೆ. 14-16 ಕ್ಷೇತ್ರ ಕಾಂಗ್ರೆಸ್ ಗೆಲ್ಲಲಿದೆ. ಎರಡೂ ಪಕ್ಷಗಳಿಗೂ 50:50 ಗೆಲ್ಲುವ ಅವಕಾಶವಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ, ಬಿಜೆಪಿ ಚಾರ್ ಸೋ ಫಾರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, 400 ಸೀಟ್ ಬರುತ್ತವೆ ಎಂದಿದ್ದರೆ ಪ್ರಧಾನಿ ಮೋದಿ ಈ ರೀತಿ ದಿನಕ್ಕೊಂದು ಭಾಷಣ, ಹೇಳಿಕೆ ಕೊಡುತ್ತಿರಲಿಲ್ಲ. ಇದು ಸೋಲಿನ ಹತಾಶೆಯ ಮುನ್ಸೂಚನೆ ಎಂದು ಲೇವಡಿ ಮಾಡಿದರು.
ಬಿಜೆಪಿ ಕಾಂಗ್ರೆಸ್ ಒಳ ಒಪ್ಪಂದ ಆಗಿದೆಯಾ ಎಂಬ ಬಗ್ಗೆ, ಬೆಳಗಾವಿಯಲ್ಲಿ ಬಿಜೆಪಿ, ಚಿಕ್ಕೋಡಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕುರಿತು ಮಾತನಾಡಿದ ಅವರು, ಬಿಜೆಪಿ, ಕಾಂಗ್ರೆಸ್ನಲ್ಲಿ ಹೊಂದಾಣಿಕೆ ರಾಜಕಾರಣ ಏನೂ ಇಲ್ಲ. ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಇನ್ನು ಯತ್ನಾಳ್ ಇಲ್ಲಿಗೆ ಯಾಕೆ ಬರಲಿಲ್ಲ? ಎಂದು ನೀವು ಪ್ರಶ್ನೆ ಮಾಡುವುದಿಲ್ಲ. ಅವರವರ ಅಡಚಣೆ, ಎಲ್ಲೆಲ್ಲಿ ಬರಬೇಕು ಬಂದಿದ್ದಾರೆ. ಕೊನೆ ಘಳಿಗೆಯಲ್ಲಿ ನಮಗೂ ಮೂರು ನಾಲ್ಕು ಕ್ಷೇತ್ರಗಳಿಗೆ ಸಮಯದ ಅಭಾವದಿಂದ ಹೋಗಲು ಸಾಧ್ಯವಾಗಲಿಲ್ಲ ಎಂದು ಸಮರ್ಥಿಸಿಕೊಂಡರು.
ಚಿಕ್ಕೋಡಿಯಲ್ಲಿ ಲೀಡ್ ಎಷ್ಟು ಎನ್ನುವುದನ್ನು ನೀವೇ (ಮಾಧ್ಯಮಗಳೇ) ಹೇಳಬೇಕು. ಎಷ್ಟು ಅಂತರ ಎಂಬ ಬಗ್ಗೆ ಇನ್ನೂ ಚರ್ಚೆಯ ಹಂತದಲ್ಲಿದೆ. ಅವರಂತೂ ಗೆಲ್ಲುವ ಪ್ರಶ್ನೆ ಉದ್ಭವಿಸುವುದಿಲ್ಲ. ನಾವು ಎಷ್ಟು ಅಂತರದಿಂದ ಗೆಲ್ಲುತ್ತೇವೆ ಎನ್ನುವುದಷ್ಟೇ ಪ್ರಶ್ನೆ. ಎಲ್ಲರೂ 1 ಲಕ್ಷ ಅಂತರ ಎಂದು ಹೇಳುತ್ತಿದ್ದಾರೆ. ಬೆಳಗಾವಿ ಕೂಡ ಗೆಲ್ಲುತ್ತೇವೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದಕ್ಕೆ ಬಿಜೆಪಿ ಟೀಕೆಗೆ, ಟೀಕೆ ಮಾಡಲು ಅದು ಅವರಿಗೆ ಸಂಬಂಧಿಸಿದ್ದಲ್ಲ. ನಮ್ಮ ಪಕ್ಷ ಯಾರಿಗೆ ಟಿಕೆಟ್ ಕೊಡಬೇಕು ಎಂಬುದು ನಮಗೆ ಸಂಬಂಧಪಟ್ಟದ್ದು. ಅಭ್ಯರ್ಥಿ ವಿರೋಧ ಮಾಡಲಿ. ಆದರೆ, ಇವರಿಗೆ ಟಿಕೆಟ್ ಕೊಟ್ಟಿರಿ ಅಂತಾ ಹೇಳುವುದು ಅವರ ಡ್ಯೂಟಿ ಅಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಲಿಸ್ಟ್ ತೆಗೆದು ನೋಡಿದರೆ ಅವರ ಸಾಕಷ್ಟು ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದಾರೆ. ಎಲ್ಲರ ಮಕ್ಕಳೂ ಇದ್ದಾರೆ. ಆದರೆ, ನಮ್ಮದು ಬಹಳ ಹೈಲೈಟ್ ಮಾಡುತ್ತಿದ್ದಾರೆ. ಇನ್ನು ಸಚಿವರ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದು, ನೂರಕ್ಕೆ ನೂರು ಪ್ಲಸ್ ಆಗಿದೆ ಎಂದು ತಿರುಗೇಟು ಕೊಟ್ಟರು.