ಚಿಕ್ಕೋಡಿ(ಬೆಳಗಾವಿ) : ಮುಡಾ ಹಗರಣವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷ ನಾಯಕರು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಯಾರೋ ಮಾಡಿದ ತಪ್ಪಿಗೆ ಇವರು ಯಾಕೆ ರಾಜೀನಾಮೆ ಕೊಡಬೇಕು?, ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಿಎಂ ಪರವಾಗಿ ಬ್ಯಾಟ್ ಬೀಸಿದರು.
ಅವರು ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸಂಭಾವ್ಯ ಪ್ರವಾಹ ಎದುರಿಸುವ ಕೃಷ್ಣಾನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅಂಥಂದ್ದೇನೂ ಆಗಿಲ್ಲ, ಯಾರೋ ಮಾಡಿದ್ದಕ್ಕೆ ಅವರು ಹೊಣೆಗಾರರಾಗುವುದಿಲ್ಲ, ನಾನು ತಪ್ಪು ಮಾಡಿದರೆ ಸಿಎಂ ಹೊಣೆಗಾರರಲ್ಲ, ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ವಿಧಿಸಲಾಗುತ್ತದೆ. ಅಂತಿಮವಾಗಿ ನ್ಯಾಯಾಲಯದಲ್ಲಿ ತೀರ್ಮಾನ ಆಗಬೇಕು ಎಂದು ತಿಳಿಸಿದರು.
ಎಸ್ಸಿ ಎಸ್ಟಿ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಬಿಜೆಪಿ ನಾಯಕರ ಆರೋಪ ವಿಚಾರಕ್ಕೆ ಮಾತನಾಡಿದ ಅವರು, ತನಿಖೆ ನಡೆಯುತ್ತಿದೆ, ನ್ಯಾಯಾಲಯದಲ್ಲಿ ಅಂತಿಮವಾಗಿ ತೀರ್ಪು ಬರಬೇಕು, ಸದ್ಯಕ್ಕೆ ಆರೋಪ ಅಷ್ಟೇ ಇರುವುದರಿಂದ ಅಂತಿಮ ತೀರ್ಪು ಬರುವವರೆಗೆ ಕಾಯಬೇಕು ಎಂದು ಹೇಳಿದರು.
ಕೃಷ್ಣಾನದಿ ಪ್ರವಾಹ ಎದುರಿಸಲು ಬೆಳಗಾವಿ ಜಿಲ್ಲಾಡಳಿತ ಎರಡು ಮೂರು ತಿಂಗಳ ಹಿಂದೆ ತಯಾರಿ ನಡೆಸಿದೆ. ಸದ್ಯಕ್ಕೆ ಪ್ರವಾಹದ ಭೀತಿ ಇಲ್ಲ, ಮಹಾರಾಷ್ಟ್ರ ಜಲಾಶಯಗಳಿಂದ ಇನ್ನು 30 ಸಾವಿರ ಕ್ಯೂಸೆಕ್ ನೀರು ಬಂದರೂ ಯಾವುದೇ ತೊಂದರೆ ಆಗುವುದಿಲ್ಲ. ನೆರೆ ಸಂತ್ರಸ್ತರು ಕಾಳಜಿ ಕೇಂದ್ರಗಳಿಗೆ ಬಂದರೆ ಅಧಿಕಾರಿಗಳು ತಯಾರಾಗಿದ್ದಾರೆ. ಹಿಂದೆ ಕೃಷ್ಣಾ ನದಿಗೆ ನಿತ್ಯ ಐದು ಲಕ್ಷ ಕ್ಯೂಸೆಕ್ ನೀರು ಬಂದಿರುವ ನಿರ್ದೇಶನವಿದೆ ಎಂದರು.