ಮಂಗಳೂರು:ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವ ಬಗ್ಗೆ ನಮ್ಮದೇನು ಹಠ ಇಲ್ಲ. ಹೈಕಮಾಂಡ್‌ಗೆ ರಿಕ್ವೆಸ್ಟ್ ಮಾತ್ರ ಮಾಡಿದ್ದೇನೆ. ಮುಂದಿನ ನಿರ್ಧಾರ ವರಿಷ್ಠರಿಗೆ ಬಿಟ್ಟದ್ದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಮಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಹೋಗಿ ಹೈಕಮಾಂಡ್‌ಗೆ ಪ್ರಾರ್ಥನೆ ಮಾಡುವುದು ಮಾತ್ರ. ಹೈಕಮಾಂಡ್ ಬಳಿ ಹೇಳಲು ನಮ್ಮ ಪಕ್ಷದಲ್ಲಿ ಎಲ್ಲರೂ ಸ್ವತಂತ್ರರಿದ್ದಾರೆ. ಅಂತಿಮವಾಗಿ ಈ ಬಗ್ಗೆ ಪಕ್ಷದ ವರಿಷ್ಠರು ನಿರ್ಧಾರ ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದರು.
ದಲಿತ ಸಮಾವೇಶದ ವಿಚಾರದಲ್ಲಿ ಮಾತನಾಡಿದ ಅವರು, ಸದ್ಯಕ್ಕೆ ದಲಿತ ಸಮಾವೇಶ ಇಲ್ಲವೇ ಇಲ್ಲ. ಈ ಬಗ್ಗೆ ಖಚಿತವಾಗಿ ಹೇಳುತ್ತೇನೆ. ಅದು ಗೃಹ ಸಚಿವರ ನೇತೃತ್ವದಲ್ಲಿ ನಡೆಯುವ ಸಮಾವೇಶ. ಅವರು ಯಾವಾಗ ಹೇಳುತ್ತಾರೋ ಆಗ ಸಮಾವೇಶ ನಡೆಯುತ್ತದೆ ಎಂದರು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೆಹಲಿ ಭೇಟಿ ವಿಚಾರವಾಗಿ ಮಾತನಾಡಿ, ದೆಹಲಿ ಹೈಕಮಾಂಡ್ ಎಂದರೆ ದೇವಸ್ಥಾನ ಇದ್ದ ಹಾಗೆ. ಅಲ್ಲಿಗೆ ಯಾರು ಬೇಕಿದ್ರೂ ಹೋಗಬಹುದು, ಯಾರು ಹೋಗೋದಕ್ಕೂ ನಿರ್ಬಂಧವಿಲ್ಲ. ನಾನು ಹೋದಾಗ ಪಕ್ಷ ಬೆಳೆಯಬೇಕು. ಮತ್ತೆ ಅಧಿಕಾರಕ್ಕೆ ಬರಬೇಕು ಅನ್ನೋದನ್ನು ಹೈಕಮಾಂಡ್ ಬಳಿ ಬೇಡಿಕೊಂಡಿದ್ದೇನೆ. ಎಲ್ಲರೂ ಹೋಗಿ ಅದನ್ನೇ ಬೇಡೋದು. ಸಣ್ಣಪುಟ್ಟ ವ್ಯತ್ಯಾಸಗಳು ಇದ್ದರೆ ಅದನ್ನ ಸರಿ ಮಾಡೋ ಪ್ರಾರ್ಥನೆ ಕೂಡಾ ಅಲ್ಲೇ ಆಗುತ್ತದೆ ಎಂದು ತಿಳಿಸಿದರು.