ಸಂತೋಷ್ ಲಾಡ್ (Etv Bharat) ಧಾರವಾಡ:ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಹಾದಾಯಿ ವಿಚಾರ ಮಾತಾಡುತ್ತಾರೆ. ಈ ಯೋಜನೆಯಲ್ಲಿ ಏನು ಅವರು ಮಾಡಿದ್ದಾರೆ?. ಪರಿಸರ ಇಲಾಖೆಯ ಅನುಮತಿ ಕೊಡಿಸೋದು ಇವರಿಗೆ ಕಷ್ಟವೇ?, ಇದೀಗ ಅನುಮತಿ ಕೊಡುತ್ತಿಲ್ಲ ಅನ್ನುತ್ತಾರೆ. ಅದನ್ನೇ ನೇರವಾಗಿ, ಗಟ್ಟಿಯಾಗಿ ಹೇಳಬೇಕಲ್ಲವೇ ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ನಗರದ ಹೊರವಲಯದ ಕಿತ್ತೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಪ್ರಲ್ಹಾದ್ ಜೋಶಿ ಅವರಿಗೆ ಪ್ರಧಾನಿ ಮೋದಿ ಪ್ರಶಂಸನಾ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದರು. ''ಮೋದಿಯವರೇ ದೊಡ್ಡ ಸುಳ್ಳುಗಾರ. ಓರ್ವ ಸುಳ್ಳು ಗುರು, ಇನ್ನೊಬ್ಬ ಸುಳ್ಳು ಗುರುವಿಗೆ ಪತ್ರ ಕೊಟ್ಟರೆ ಏನು ಹೇಳೋಣ?, ಮೋದಿ ಪವರ್‌ಫುಲ್ ಪ್ರಧಾನಿ ಎಂದು ಹೇಳಿಕೊಳ್ಳುತ್ತಾರೆ. 10 ವರ್ಷದಿಂದ ಕೇಂದ್ರದಲ್ಲಿ ಬಿಜೆಪಿ ಇದೆ. ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಆಡಳಿತ ಮಾಡಿದ್ದು, ಏನ್ ಅಭಿವೃದ್ಧಿ ಕೆಲಸ ಮಾಡಿದ್ದಾರೆ'' ಎಂದು ಕಿಡಿಕಾರಿದರು.
''ಜೋಶಿಯವರು ಸುಮ್ಮನೆ ಭಾಷಣ ಮಾಡುತ್ತಾರೆ. ಜಿಲ್ಲೆಯನ್ನು ಬೆಂಗಳೂರು ಮಾಡೋದಾಗಿ ಹೇಳುತ್ತಾರೆ. ಅದನ್ನು ಹೇಗೆ ನೀವು ಮಾಡುತ್ತೀರಿ ಅನ್ನೋದರ ಚರ್ಚೆ ಆಗಲಿ, ಬರೀ ಸುಳ್ಳು ಹೇಳೋದೇ ಆಗಿದೆ. ನಮ್ಮ ಆಡಳಿತದಲ್ಲಿದ್ದ ಸಾಲಕ್ಕೂ, ಹತ್ತು ವರ್ಷದ ಸಾಲಕ್ಕೂ ತಾಳೆ ಹಾಕಿ ನೋಡಿ. ಹಾಗೆ ಉದ್ಯಮಿಗಳ ಎಷ್ಟು ಲಕ್ಷಾಂತರ ಸಾಲ ಮನ್ನಾ ಮಾಡಿದ್ದೀರಿ ಹೇಳಿ'' ಎಂದು ಹರಿಹಾಯ್ದರು.
''ಬರದ ವಿಚಾರವಾಗಿ ರಾಜ್ಯ ಸರ್ಕಾರ ತಡವಾಗಿ ಮಾಹಿತಿ ಕೊಟ್ಟಿದೆ ಅಂತಾರೆ. ನಾವು ಹೋಗಿ ಪರಿಹಾರ ಕೇಳಿದ ಫೋಟೋಗಳಿವೆ. ಬಳಿಕ ಕೇಂದ್ರ ಬರ ಪರಿಹಾರ ಅಧ್ಯಯನ ತಂಡ ಬಂತು. ಅವರು ಕೂಡ ವರದಿ ಕೊಟ್ಟರು. ಆದರೂ ಪರಿಹಾರ ಬರಲೇ ಇಲ್ಲ. ಬಳಿಕ ನಾವು ಸುಪ್ರೀಂ ಕೋರ್ಟ್ ಮೊರೆ ಹೋದೆವು. ಬಳಿಕ ಈಗ ಪರಿಹಾರ ಬಂದಿದೆ. ಅವರು ರಾಜ್ಯದ ಬಗ್ಗೆ ಯಾವತ್ತಾದರೂ ಲೋಕಸಭೆಯಲ್ಲಿ ಮಾತಾಡಿದ್ದಾರಾ?. ಮಾತನಾಡಿದ್ದರೆ, ಒಂದೇ ಒಂದು ವಿಡಿಯೋ ತೋರಿಸಿ. ಜೋಶಿ ತಮ್ಮ ಪ್ರಚಾರಕ್ಕೆ ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಅವರನ್ನು ಕರೆಸುತ್ತಿದ್ದಾರೆ. ಅವರು ಕನ್ನಡ ವಿರೋಧಿ. ಮಹಾರಾಷ್ಟ್ರ, ಗೋವಾ ಮಹದಾಯಿಗೆ ಅಡ್ಡಗಾಲು ಹಾಕುತ್ತಿವೆ. ಅಂಥವರನ್ನು ಧಾರವಾಡಕ್ಕೇಕೆ ಕರೆಸಬೇಕು'' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕ ವಿನಯ ಕುಲಕರ್ಣಿ ಮಾತನಾಡಿ, ''ಪ್ರಹ್ಲಾದ್ ಜೋಶಿ ಅವರಿಂದ ಲಿಂಗಾಯತ ಸಮಾಜ ತುಳಿಯುವ ಕೆಲಸ ಆಗುತ್ತಿದ್ದು, ಲಿಂಗಾಯತರು ಅವರನ್ನು ಕಿತ್ತು ಹಾಕಿದಾಗ ಮಾತ್ರ ಸಮಾಜ ಉಳಿಯಲು ಸಾಧ್ಯ. ಲಿಂಗಾಯತ ಸ್ವಾಮೀಜಿಗಳಿಗೆ ದುಡ್ಡು ಕೊಟ್ಟು ಖರೀದಿ ಮಾಡುವ ಷಡ್ಯಂತ್ರ ನಡೆದಿದೆ. ಈ ಕುರಿತು ದಾಖಲೆಗಳಿವೆ. ಇದನ್ನು ಚುನಾವಣಾ ಆಯೋಗಕ್ಕೆ ನೀಡಲಾಗುವುದು'' ಎಂದು ಹೇಳಿದರು.
ಭಿತ್ತಿ ಫಲಕ ಹಿಡಿದು ಜಾಗೃತಿ:ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನೋದ್ ಅಸೂಟಿ ಅವರ ಪರವಾಗಿ ಸಂತೋಷ್ ಲಾಡ್ ವಿನೂತನವಾಗಿ ಪ್ರಚಾರ ನಡೆಸಿದರು. ಕಳೆದ ಹತ್ತು ವರ್ಷಗಳಲ್ಲಿ ದೇಶದ ಸಾಲ 168.72 ಲಕ್ಷ ಕೋಟಿ ಆಗಿದೆ. ಭಾರತೀಯ ರೂಪಾಯಿ ಮೌಲ್ಯ ಶೇ.41.37ರಷ್ಟು ಕುಸಿದಿದೆ. ಇದಕ್ಕೆಲ್ಲ ಯಾರು ಹೊಣೆ?. ಎಂಬೆಲ್ಲ ಭಿತ್ತಿ ಫಲಕಗಳ ಹಿಡಿದು ಕೆಲಗೇರಿಯ ಬೀದಿಗಳಲ್ಲಿ ಸಂಚರಿಸಿದರು. ದೇಶದ ಜನರಿಗೆ ಕಳೆದ ಹತ್ತು ವರ್ಷಗಳಲ್ಲಿ ಸಾಲ ಎಷ್ಟು ಹೆಚ್ಚಳವಾಗಿದೆ. ಚಿನ್ನದ ಬೆಲೆ ಎಷ್ಟು ಏರಿಕೆಯಾಗಿದೆ. ಅಗತ್ಯ ವಸ್ತುಗಳು, ತೈಲ ಬೆಲೆ ಎಷ್ಟಾಗಿದೆ ಎಂಬುದರ ಅರಿವು ಇರಬೇಕೆಂದು ಸಲಹೆ ನೀಡಿದರು.
ಇದನ್ನೂ ಓದಿ:ಸಾಮೂಹಿಕ ಅತ್ಯಾಚಾರಿಗೆ ದೇಶ ತೊರೆಯಲು ಅನುಕೂಲ ಮಾಡಿಕೊಡುವುದೇ ಮೋದಿ ಗ್ಯಾರಂಟಿ: ರಾಹುಲ್ ಗಾಂಧಿ