ಸಚಿವ ರಾಮಲಿಂಗಾರೆಡ್ಡಿ ಲೇವಡಿ ಕೋಲಾರ:ನಮಲ್ಲಿ ಸಿಎಂ, ಶ್ಯಾಡೋ ಸಿಎಂ, ಸೂಪರ್ ಸಿಎಂ ಎಂದು ಸಾವಿರ ಇರುತ್ತೆ, ಅದು ಇವರಿಗ್ಯಾಕೆ ಎಂದು ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ಕೋಲಾರದ ಕೆಜಿಎಫ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯಿಸಿ, ಮೋದಿ ಅವರು ನಮ್ಮ ದೇಶದ ಪ್ರಧಾನಿ. ಬರಗಾಲ ಬಂದು ಆರು ತಿಂಗಳಾಯ್ತು, ಮೂರುಕಾಸು ಹಣ ಬಿಡುಗಡೆ ಮಾಡಲಿಲ್ಲ, ರೈತರು ಕಷ್ಟದಲ್ಲಿ ಇದ್ದಾಗ ಸಹಾಯ ಮಾಡಲಿಲ್ಲ ಎಂದು ವಾಗ್ದಾಳಿ ನಡೆಸಿದರು.
ಪೊಲೀಸ್, ಇಡಿ, ಐಡಿ ಎಲ್ಲರನ್ನ ಕರೆದುಕೊಂಡು ಇವತ್ತು ವೋಟ್ ಕೇಳೊದಕ್ಕೆ ಬರ್ತಿದಾರೆ. ಇದರಿಂದ ಬಿಜೆಪಿ ಪಕ್ಷದವರಿಗೆ ನಾಚಿಕೆ ಆಗಬೇಕು. ರೈತರಿಗೆ ಬಿಡುಗಾಸು ಬಿಡುಗಡೆ ಮಾಡದೇ, ನಮ್ಮ ರಾಜ್ಯದ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಬಗ್ಗೆ ಮಾತನಾಡುವ ನೈತಿಕ ಹಕ್ಕು ಅವರಿಗೆ ಇಲ್ಲ. ಏನು ಕೆಲಸ ಮಾಡಿದ್ದೀರಿ ಎಂದು ರಾಜ್ಯಕ್ಕೆ ಬರ್ತಿದ್ದೀರಿ?. ಚುನಾವಣಾ ಬಾಂಡ್ ವಿಚಾರವಾಗಿ ಐಟಿ, ಇಡಿ ದಾಳಿ ನಡೆಸಿದರೆ ಸಾಕು ಬಿಜೆಪಿ ಅವರಿಗೆ ಬಾಂಡ್ ಕೊಡ್ತಾರೆ, ಅಲ್ಲಿ ಐಟಿ ದಾಳಿ ಆಗುತ್ತೆ ಇಲ್ಲಿ ಬಿಜೆಪಿಗೆ ದುಡ್ಡು ಬರುತ್ತೆ ಎಂದು ಆರೋಪಿಸಿದರು.
ಮೋದಿ 130 ಲಕ್ಷ ಕೋಟಿ ಸಾಲ ಮಾಡಿದ್ದಾರೆ:ಇನ್ನು ಬರಗಾಲದಲ್ಲಿ ಮೂರು ಕಾಸು ಹಣ ಕೊಟ್ಟಿಲ್ಲ, ಕುಡಿಯುವ ನೀರು ಕೊಟ್ಟಿಲ್ಲ. ಹೀಗಿರುವಾಗ ಮೋದಿ ಗ್ಯಾರಂಟಿ ಏನು, ಸಾಲ ಮಾಡಿರುವುದೇ ದೊಡ್ಡ ಗ್ಯಾರಂಟಿ. ಇನ್ನೂ 1947 ರಿಂದ 2014 ರವರೆಗೆ 54 ಲಕ್ಷ ಕೋಟಿ ಸಾಲ ಇತ್ತು. ಮೋದಿ ಅವರು ಒಬ್ಬರೆ ದೇಶದಲ್ಲಿ 2014 ರಿಂದ 2024 ರವರೆಗೆ 130 ಲಕ್ಷ ಕೋಟಿ ಹೊಸ ಸಾಲ ಮಾಡಿದ್ದಾರೆ. ಇದೇ ಅವರ ಗ್ಯಾರಂಟಿ ಎಂದರು.
ಕೋಲಾರದ ಕಾಂಗ್ರೆಸ್ ಅಭ್ಯರ್ಥಿ ವಿಚಾರವಾಗಿ ಮಾತನಾಡಿದ ಅವರು, ಅಭ್ಯರ್ಥಿ ಯಾರು ಎಂದು ನಮಗೆ ಗೊತ್ತಿಲ್ಲ, ಆದರೆ ಈ ಬಾರಿ ಕೋಲಾರದ ಜನ ಕಾಂಗ್ರೆಸ್ ಕೈ ಹಿಡಿಯುತ್ತಾರೆ. ಯಾವುದೇ ಬಣಗಳಿದ್ದರೂ ಚುನಾವಣಾ ಸಮಯಕ್ಕೆ ಸರಿಹೋಗುತ್ತದೆ. ರೈಟು, ಲೆಫ್ಟ್ , ಸೆಂಟರ್ ಯಾರಿಗೇ ಕೊಟ್ಟರೂ ಜನ ಈ ಬಾರಿ ಕಾಂಗ್ರೆಸ್ಗೆ ವೋಟ್ ಹಾಕ್ತಾರೆ. ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂದು ಬಿಜೆಪಿ ನಾಯಕರು ಸುಮ್ಮನೆ ತಲೆ ಇಲ್ಲದೆ ಏನೇನೊ ಮಾತನಾಡುತ್ತಾರೆ, ಅವರು ಅಧಿಕಾರ ಕಳೆದುಕೊಂಡಿದ್ದಾರೆ. ಮೀನನ್ನ ನೀರಿನಿಂದ ಈಚೆ ತೆಗೆದುಹಾಕಿದ ಹಾಗೆ ಅವರು ಒದ್ದಾಡುತ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:'ಬಿಜೆಪಿ-ಜೆಡಿಎಸ್ ಮೈತ್ರಿ ಸುಸೂತ್ರವಾಗಿ ನಡೆಯಲಿದೆ, ಗೊಂದಲಗಳು ಸುಖಾಂತ್ಯ ಕಾಣಲಿವೆ'