ಸಚಿವ ರಾಜಣ್ಣ ಸಮಾರಂಭದಲ್ಲಿ ಮಾತನಾಡಿದರು. ತುಮಕೂರು:ನನಗೂ ಹಾಸನಕ್ಕೂ ಏನ್ ಸಂಬಂಧ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿಯನ್ನಾಗಿಯೂ ಸಹ ಹಾಕಿದ್ದಾರೆ. ಕೆಲವರು ನನ್ನ ಅಭಿಮಾನಿಗಳು ಹೆದರಿಕೊಂಡು ಬಿಟ್ಟಿದ್ದರು. ಸಾರ್ ನೀವು ಹಾಸನಕ್ಕೆ ಹೋಗುವುದು ಬೇಡ ಅಂತ. ಯಾಕಂದ್ರೆ ಅಲ್ಲಿ ವಾಮಾಚಾರ ಮಾಡಿಸಿ ಬಿಡ್ತಾರೆ ಅಂದಿದ್ದರು ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಹೇಳಿದರು.
ನಾವು ಉಗ್ರ ನರಸಿಂಹ ಸ್ವಾಮಿ ಭಕ್ತರು ವಾಮಾಚಾರ ತಾಕೋದಿಲ್ಲ: ತುಮಕೂರು ನಗರದ ಗುಬ್ಬಿ ವೀರಣ್ಣ ಕಲಾಮಂದಿರದಲ್ಲಿ ನಡೆದ ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಗ ನಾನು ಹೇಳಿದೆ. ಯಾರಾದ್ರೂ ವಾಮಾಚಾರ ಮಾಡೋರು ಇದ್ರೆ ಸ್ವತಃ ನಾನೇ ಕೂತ್ಕೊಳ್ತೀನಿ, ನನ್ನ ಮೇಲೆ ವಾಮಾಚಾರ ಮಾಡಿ ಎಂದೆ. ನಾವು ಉಗ್ರ ನರಸಿಂಹ ಸ್ವಾಮಿ ಭಕ್ತರು. ಹಾಗಾಗಿ ನಮಗೆ ಯಾವ ವಾಮಾಚಾರನೂ ತಾಕೋದಿಲ್ಲ ಎಂದು ತಿಳಿಸಿದರು.
ವಾಮಾಚಾರ ತಗುಲುವುದಿಲ್ಲ ಅನ್ಕೋಬೇಡಿ. ನಾನು ಹಾಸನಕ್ಕೆ ಕುಣಿಗಲ್ ಮೂಲಕ ಮೊದಲ ದಿನ ಹೋಗುತ್ತಿದ್ದಾಗ ಕುಣಿಗಲ್ ನಲ್ಲಿ ಪಟಾಕಿ ಸಿಡಿದು, ಕಣ್ಣಿಗೆ ಏಟಾಗಿತ್ತು. ಡಾಕ್ಟರ್ ಕಣ್ಣು ಕ್ಲೀನ್ ಮಾಡಿ ಹಾಸನಕ್ಕೆ ಹೋಗುವುದು ಬೇಡ ಎಂದಿದ್ದರು. ಎರಡೂ ಕಣ್ಣು ಹೋದರೂ ಪರವಾಗಿಲ್ಲ ಎಂದು ಧೈರ್ಯದಿಂದ ಹೋದೆ. ಹೆದರಿ ಹಾಸನಕ್ಕೆ ಬಂದಿಲ್ಲ ಎಂಬ ಸಂದೇಶ ಹೋಗುತ್ತೆ ಅಂತ ಹೇಳಿ ಹಠದಿಂದ ಹೋದೆ ಎಂದು ಸಚಿವ ರಾಜಣ್ಣ ಹೇಳಿದರು.
ಸುಳ್ಳು ಹೇಳಿ ಕೆಲವರು ಅಪಪ್ರಚಾರ:ಲೋಕಸಭೆ ಚುನಾವಣೆ ಹತ್ತಿರ ಇರುವುದರಿಂದ ಈಗೆಲ್ಲಾ ರಾಜಕೀಯವಾಗಿ ಅಪಪ್ರಚಾರ ಮಾಡಿ ಸುಳ್ಳು ಹೇಳುತ್ತಾರೆ. ಇಂಥ ಮಾತುಗಳಿಗೆ ಜನರು ಮರಳು ಆಗುವರು. ಸುಳ್ಳು ಹೇಳುವವರಿಗೆ ಹಾಗೂ ಮರಳು ಆಗುವಂಥವರಿಗೆ ಸರಿಯಾಗಿ ಬುದ್ಧಿ ಹೇಳಬೇಕೆಂದು ಸಿಎಂ ಹಾಗೂ ನಾವೆಲ್ಲ ಎಚ್ಚರಿಕೆಯಿಂದ ಪ್ರವಾಸ ಕೈಗೊಳ್ಳುತ್ತಿದ್ದೇವೆ ಎಂದು ತಿಳಿಸಿದರು.
ನಾವು ಹುಟ್ಟುತ್ತಲೇ ನಾಯಕರು:ವೇದಿಕೆ ಭಾಷಣದಲ್ಲಿ ತಮ್ಮ ಜನಾಂಗದ ಬಗ್ಗೆ ಪರ ವಿರೋಧ ಎರಡು ಮಾತನಾಡಿದ ಕೆ ಎನ್ ರಾಜಣ್ಣ, ನಾವು ಹುಟ್ಟುತ್ತಲೇ ನಾಯಕರು, ಹಾಗಾಗಿ ಬೇರೆಯವರನ್ನು ನಾವು ನಾಯಕರು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಮ್ಮಲ್ಲಿ ಒಗ್ಗಟ್ಟಿನ ಕೊರತೆಯಿದೆ. ಹಾಗಾಗಿ ನಾವು ಅಭಿವೃದ್ಧಿಯಾಗುತ್ತಿಲ್ಲ. ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಆಸ್ತಿಯಾಗಿಸಬೇಕು. ಮಧುಗಿರಿಯಲ್ಲಿ ನಮ್ಮ ಜಾತಿಯವರಿಂದಲೇ ನಮಗೆ ಗೂಟ ಬೀಳ್ತಾ ಇದೆ. ಬೇರೆ ಸಮುದಾಯದವರು ನನ್ನ ಕೈ ಹಿಡಿಯುತ್ತಿದ್ದಾರೆ. ಯಾಕೆಂದರೆ ನಾನು ಎಲ್ಲಾ ವರ್ಗದ ಬಡ ಜನರ ಪರವಾಗಿದ್ದವನು ಎಂದು ತಿಳಿಸಿದರು.
ಪ್ರತಿಯೊಬ್ಬರು ದೃಢವಾದ ನಿರ್ಧಾರ ತೆಗೆದುಕೊಳ್ಳಬೇಕು, ಆ ನಿರ್ಧಾರದಲ್ಲಿ ಮುನ್ನುಗ್ಗಿದರೆ ಯಶಸ್ಸು ಸಿಕ್ಕೇ ಸಿಗುತ್ತೆ ಎಂದು ಇದೇ ವೇಳೆ ವಿದ್ಯಾರ್ಥಿಗಳಿಗೆ ಸಚಿವರು ಸಲಹೆ ನೀಡಿದರು.
ಇದನ್ನೂಓದಿ:ಸುಳ್ಳು, ಭ್ರಷ್ಟಾಚಾರ ಕಾಂಗ್ರೆಸ್ನ ಗಂಗೋತ್ರಿ: ಬೊಮ್ಮಾಯಿ