ಕರ್ನಾಟಕ

karnataka

'ಕಾನೂನು ದೇವೇಗೌಡರ ಮೊಮ್ಮಕ್ಕಳಿಗೂ, ನಮ್ಮ ಮಕ್ಕಳಿಗೂ ಒಂದೇ': ಹೆಚ್‌ಡಿಕೆ ಹೇಳಿಕೆಗೆ ಆರ್.ಬಿ.ತಿಮ್ಮಾಪುರ ತಿರುಗೇಟು - R B Thimmapura

By ETV Bharat Karnataka Team

Published : Jun 24, 2024, 5:52 PM IST

ದೇವೇಗೌಡರ ಕುಟುಂಬವನ್ನು ಮುಗಿಸಲು ಹುನ್ನಾರ ನಡೆಯುತ್ತಿದೆ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಸಚಿವ ಆರ್​.ಬಿ.ತಿಮ್ಮಾಪುರ ತಿರುಗೇಟು ನೀಡಿದ್ದಾರೆ.

minister-r-b-thimmapura
ಸಚಿವ ಆರ್​.ಬಿ.ತಿಮ್ಮಾಪುರ, ಹೆಚ್.ಡಿ.ಕುಮಾರಸ್ವಾಮಿ (ETV Bharat)

ಸಚಿವ ಆರ್​.ಬಿ.ತಿಮ್ಮಾಪುರ ಪ್ರತಿಕ್ರಿಯೆ (ETV Bharat)

ಬಾಗಲಕೋಟೆ:"ಮಾನಗೇಡಿ ಕೆಲಸ ಮಾಡಿ ಅಂತಾ ನಾವು ಹೇಳಿದ್ವಾ?. ಪ್ರಜ್ವಲ್ ಮತ್ತು ಸೂರಜ್ ಆ ಕೆಲಸ ಮಾಡಿಲ್ಲ. ನಮ್ಮ ಹುಡುಗ್ರು ಒಳ್ಳೆಯ ಕೆಲಸ ಮಾಡಿದ್ರು ಅಂತ ಕೇಸ್​ ಹಾಕಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಲಿ" ಎಂದು ಸಚಿವ ಆರ್.ಬಿ.ತಿಮ್ಮಾಪುರ ಸವಾಲು ಹಾಕಿದರು.

ಬಾಗಲಕೋಟೆ ನಗರದಲ್ಲಿ ಇಂದು ಕೆಡಿಪಿ ಸಭೆಗೆ ಮುನ್ನ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

"ಕುಮಾರಸ್ವಾಮಿ ಕೇಂದ್ರ ಸಚಿವರಿದ್ದಾರೆ. ಕಾನೂನು ದೇವೇಗೌಡರ ಮೊಮ್ಮಕ್ಕಳಿಗೂ, ನಮ್ಮ ಮಕ್ಕಳಿಗೂ ಒಂದೇ. ಯಡಿಯೂರಪ್ಪ, ಸಿದ್ದರಾಮಯ್ಯನವರ ಮಕ್ಕಳಿಗೂ ಒಂದೇ ಕಾನೂನು. ಪೊಲೀಸರು ಕಾನೂನು ಪ್ರಕಾರ ತನಿಖೆ ಮಾಡುತ್ತಿದ್ದಾರೆ. ಅದಕ್ಕೆ ದೇವೇಗೌಡರ ಫ್ಯಾಮಿಲಿ ಮುಗಿಸಿಬಿಡ್ತಾರೆ ಎನ್ನುವುದು ಸರಿಯಲ್ಲ" ಎಂದರು.

"ಅವರು ಯಾವಾಗಲೂ ಸಿಂಪತಿ ಗಳಿಸಲು ಏನು ಮಾಡಬೇಕು, ಅದರಲ್ಲಿ ಹೇಗೆ ಲಾಭ ಪಡೀಬೇಕು ಅಂತಾ ಯೋಚನೆ ಮಾಡುತ್ತಾರೆ. ಕೇಂದ್ರ ಸಚಿವರಾಗಿ ಅವರು ಹೀಗೆ ಹೇಳಬಾರದು. ರಾಜಕೀಯ ಷಡ್ಯಂತ್ರ ಅಂತಾರೆ, ಯಾವುದರಲ್ಲಿದೆ ರಾಜಕೀಯ ಷಡ್ಯಂತ್ರ?" ಎಂದು ಕೇಳಿದರು.

"ಮಾನಗೇಡಿ ಕೆಲಸ ಮಾಡಿದವರನ್ನು ಬಿಟ್ಟರೆ ಅವರ ದೃಷ್ಟಿಯಲ್ಲಿ ಒಳ್ಳೆಯ ಸರ್ಕಾರ. ಪ್ರಜ್ವಲ್ ಮತ್ತು ಸೂರಜ್ ಮಾಡಿದ್ದು ತಪ್ಪೋ ಸರಿಯೋ ಎಂದು ಹೇಳಲಿ" ಎಂದರು.

ಹೆಚ್ಚುವರಿ ಡಿಸಿಎಂ ಹುದ್ದೆಯ ಕೂಗು: ಹೆಚ್ಚುವರಿ ಡಿಸಿಎಂ ಹುದ್ದೆಯ ವಿಚಾರವಾಗಿ ಸಚಿವ ರಾಜಣ್ಣ ನೀಡಿದ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ತಿಮ್ಮಾಪುರ, "ಅದು ನನಗೆ ಗೊತ್ತಿಲ್ಲ. ನಮ್ಮ ಪಕ್ಷ ತೆಗೆದುಕೊಳ್ಳುವ ತೀರ್ಮಾನ. ಎಸಿಸಿ, ಕೆಪಿಸಿಸಿ ಏನು ತೀರ್ಮಾನ ತೆಗೆದುಕೊಳ್ಳುತ್ತೋ, ಅದಕ್ಕೆ ನಾವು ಬದ್ಧ" ಎಂದು ಹೇಳಿದರು.

ನೀವು ಡಿಸಿಎಂ ರೇಸ್​ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ, "ಕರೆದು ಕೊಟ್ಟರೆ ಯಾರು ಒಲ್ಲೆ ಅಂತಾರೆ ಹೇಳಿ?. ಮುಖ್ಯಮಂತ್ರಿ ಆಗಕ್ಕೂ ಯಾರು ಒಲ್ಲೆ ಅಂತಾರೆ ಹೇಳಿ? ಎಲ್ಲರಿಗೂ ನಿಭಾಯಿಸುವ ಶಕ್ತಿ ಇದೆ. ಎಲ್ಲಾ ಜಾತಿ, ಜನಾಂಗದವರೂ ಅಧಿಕಾರದಲ್ಲಿರಬೇಕು. ಸಿದ್ಧರಾಮಯ್ಯ ಸರ್ಕಾರದಲ್ಲಿ ಸರ್ವ ಜನಾಂಗಕ್ಕೂ ಅವಕಾಶಗಳಿವೆ" ಎಂದರು.

ಇದನ್ನೂ ಓದಿ:ಸೂರಜ್​ ರೇವಣ್ಣ ಪ್ರಕರಣ ; ಈ ರೀತಿಯ ವಿಚಾರಗಳಿಗೆ ನಾನು ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ ಎಂದ ಹೆಚ್​ಡಿಕೆ - SURAJ REVANNA

ABOUT THE AUTHOR

...view details