ಬೆಂಗಳೂರು:ಕಲಬುರಗಿ ಯುವಕರಿಗೆ ವಂಚಿಸಿ ರಷ್ಯಾ ವ್ಯಾಗನರ್ ಆರ್ಮಿಗೆ ಬಲವಂತವಾಗಿ ಸೇರಿಸಿರುವ ಮಾಹಿತಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವ ಖರ್ಗೆ, ಈ ವಿಷಯ ನನ್ನ ಗಮನಕ್ಕೆ ಬಂದಿದೆ. ಅಮಾಯಕರನ್ನ ಕರೆದುಕೊಂಡು ಹೋಗಿದ್ದಾರೆ. ರಷ್ಯಾ ವ್ಯಾಗ್ನರ್ ಗ್ರೂಪ್ಗೆ ಜಾಯಿನ್ ಮಾಡಿಕೊಂಡಿದ್ದಾರಂತೆ. ಎಐಸಿಸಿ ಅಧ್ಯಕ್ಷ ಖರ್ಗೆ ಅವರ ಜೊತೆ ರಾತ್ರಿ ಮಾತಾಡಿದ್ದೇನೆ. ವಿದೇಶಾಂಗ ಸಚಿವರಿಗೆ ಮಾತನಾಡಿ ಅಂತಾ ಹೇಳಿದ್ದೇನೆ. ಅವರು ಕೂಡ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ. ಉತ್ತರ ಭಾರತದಲ್ಲಿ ಈ ರೀತಿ ಜಾಸ್ತಿ ಆಗಿದೆ. ಕೇಂದ್ರ ಸರ್ಕಾರ ಅವರನ್ನು ರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಯಾರು ಬೇಕಾದರೂ ಕಾಂಗ್ರೆಸ್ ಪಕ್ಷಕ್ಕೆ ಬರಬಹುದು. ಓಪನ್ ಆಫರ್ ನೀಡ್ತಾ ಇದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ವಿಧಾನಸೌಧಲ್ಲಿ ಮಾತನಾಡಿದ ಅವರು, ಪಕ್ಷದ ತತ್ವ ಸಿದ್ಧಾಂತ ಒಪ್ಪಿ ಯಾರು ಬೇಕಾದರೂ ಬರಲಿ. ಬಾಂಬೆ ಬಾಯ್ಸ್ ಮಾತ್ರವಲ್ಲ. ದೆಹಲಿ ಫ್ರೆಂಡ್ಸ್. ಬೆಂಗಳೂರು ಫ್ರೆಂಡ್ಸ್ ಎಲ್ಲರೂ ಬರಲಿ, ಅವರೆಲ್ಲರೂ ಪಕ್ಷದ ಸಿದ್ಧಾಂತ ಒಪ್ಪಿದರೆ ಬಾಗಿಲು ತೆರೆದಿದೆ ಎಂದರು.
ಬುಧವಾರ ಏಕೆ ವಿರೋಧ ಮಾಡಿಲ್ಲ:ದೇವಸ್ಥಾನ ಹುಂಡಿ ಹಣದಲ್ಲಿ ಶೇ 10ರಷ್ಟು ಸರ್ಕಾರಕ್ಕೆ ಕೊಡಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವುದೇ ಕಾಯ್ದೆ ಇದ್ದರೂ ವಿಧಾನಸಭೆಯಲ್ಲಿ ತೀರ್ಮಾನ ಆಗೋದು. ನಿನ್ನೆ ಯಾಕೆ ವಿರೋಧ ಮಾಡಲಿಲ್ಲ ಇವರು ಕಡ್ಲೆ ಪುರಿ ತಿನ್ನುತ್ತಿದ್ರಾ?. ಅಂಜನಾದ್ರಿ ಬೆಟ್ಟಕ್ಕೆ 100 ಕೋಟಿ ಅನುದಾನ ಕೊಡುತ್ತಿದ್ದೇವೆ. ಹನುಮ ಧ್ವಜದ ಬಗ್ಗೆ ಮಾತನಾಡುತ್ತಾರೆ. ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ರಾಮಾಯಣ ಮ್ಯೂಸಿಯಂ ಮಾಡಲು ಭೂಮಿ ಕೊಟ್ಟಿದ್ದೆ. ಬಿಜೆಪಿಯವರು ಯಾಕೆ ಕೊಡಲಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದರು.
ಡಿಕೆಶಿ ಸಿಎಂ ಆಗ್ತಾರೆ ಎಂಬ ಡಿಕೆ ಸುರೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಚರ್ಚೆ ಆಗಿರುವುದು ನಾಲ್ಕು ಗೋಡೆಗಳ ಮಧ್ಯೆ. ಹೈಕಮಾಂಡ್ನವರು ತೀರ್ಮಾನ ಮಾಡ್ತಾರೆ. ಅದರ ವಿಶ್ಲೇಷಣೆ ಮಾಡುವ ಅಧಿಕಾರ ನಮಗಿಲ್ಲ. ಸದ್ಯಕ್ಕೆ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರು, ಡಿಸಿಎಂ ಡಿಕೆ ಶಿವಕುಮಾರ್ ಆಗಿದ್ದಾರೆ. ಅವರಿಬ್ಬರ ನೇತೃತ್ವದಲ್ಲಿ ಚುನಾವಣೆ ಗೆದ್ದಿದ್ದೇವೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನ ಗೆಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಬಿಜೆಪಿ ಕೇಂದ್ರ ನಾಯಕರ ಕಲಬುರಗಿ ಭೇಟಿ: ಎಂದೂ ಇಲ್ಲದ ಪ್ರೀತಿ ಈಗೇಕೆ ಎಂದು ಖರ್ಗೆ ಪ್ರಶ್ನೆ