ಬೆಂಗಳೂರು:545 ಪಿಎಸ್ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ ಹಾಗು ನೇಮಕಾತಿ ಆದೇಶಗಳನ್ನು ಪ್ರಕಟಿಸದೇ ತಡೆ ಹಿಡಿಯುವಂತೆ ಒಳಾಡಳಿತ ಇಲಾಖೆಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದಾರೆ.
ಪತ್ರದ ವಿವರ:'545 ಪಿಎಸ್ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿ ಅಧಿಸೂಚನೆಯನ್ನು ಜ.21, 2021ರಂದು ಹೊರಡಿಸಲಾಗಿತ್ತು. ಪರಿಶೀಲನೆಯಲ್ಲಿರುವ ಫೆ.1, 2023ರ ಸರ್ಕಾರದ ಸುತ್ತೋಲೆಗಿಂತ 2 ವರ್ಷಗಳಷ್ಟು ಮೊದಲೇ ಅಧಿಸೂಚನೆಯಾಗಿದೆ. ಪ್ರಸ್ತುತ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿಯಲ್ಲಿ ಫೆ.1, 2023ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸುತ್ತೋಲೆಯ ಸಿಂಧುತ್ವದ ಸಂಬಂಧ ದಾಖಲಾಗಿರುವ ಅರ್ಜಿ ತೀರ್ಪಿನಲ್ಲಿ ಈ ಸುತ್ತೋಲೆಯನ್ನು ರದ್ದುಪಡಿಸಲಾಗಿದೆ' ಎಂದು ಉಲ್ಲೇಖಿಸಿದ್ದಾರೆ.
'ಈ ತೀರ್ಪಿನ ವಿರುದ್ಧ ಹೈಕೋರ್ಟ್ನಲ್ಲಿ ಸಲ್ಲಿಸಲಾಗಿರುವ ರಿಟ್ ಅರ್ಜಿ ಸಂಬಂಧ ನೀಡುವ ತೀರ್ಪಿಗೊಳಪಟ್ಟು ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಜೂನ್ 6, 2020ರಂದು ಹೊರಡಿಸಿದ ಸುತ್ತೋಲೆಯನ್ವಯ ಕ್ರಮವಹಿಸುವಂತೆ ಮಹಾ ನಿರ್ದೇಶಕರು ಮತ್ತು ಆರಕ್ಷಕ ಮಹಾ ನಿರೀಕ್ಷಕರಿಗೆ ತಿಳಿಸಲಾಗಿದೆ. ಆದರೆ, ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವ್ಯಕ್ತಿಗಳಿಗೆ ಮೀಸಲಿರಿಸಿರುವ ನೇರ ನೇಮಕಾತಿ ಹುದ್ದೆಗಳನ್ನು ಭರ್ತಿ ಮಾಡುವಲ್ಲಿ ವಿವಿಧ ನೇಮಕಾತಿ ಪ್ರಾಧಿಕಾರಗಳು ಪಾಲಿಸಬೇಕಾದ ವಿಧಿ-ವಿಧಾನಗಳ ಬಗ್ಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿರುವ ವಿವಿಧ ಸುತ್ತೋಲೆಗಳಲ್ಲಿ ಗೊಂದಲಗಳಿವೆ ಮತ್ತು ಉಚ್ಛ ನ್ಯಾಯಾಲಯದಲ್ಲಿ ಪ್ರಕರಣ ಬಾಕಿ ಇದೆ. ಈ ಕುರಿತ ಗೊಂದಲಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸೆ.27, 2024ರಂದು ಸಚಿವ ಸಂಪುಟದ 371(ಜೆ) ಉಪ ಸಮಿತಿ ಸಭೆ ಕರೆಯಲಾಗಿದೆ. ಹೀಗಾಗಿ ಸೆ.27ರವರೆಗೆ 545 ಪಿಸ್ಐ (ಸಿವಿಲ್) ಹುದ್ದೆಗಳ ನೇರ ನೇಮಕಾತಿಗೆ ಸಂಬಂಧಿಸಿದಂತೆ ಆಯ್ಕೆ ಪಟ್ಟಿ ಹಾಗು ನೇಮಕಾತಿ ಆದೇಶಗಳನ್ನು ಪ್ರಕಟಿಸದೇ ತಡೆ ಹಿಡಿಯಬೇಕು' ಎಂದು ಸಚಿವ ಖರ್ಗೆ ಪತ್ರದಲ್ಲಿ ಕೋರಿದ್ದಾರೆ.
ಇದನ್ನೂ ಓದಿ:ನಗರಕ್ಕೆ ಕೇಳದ ಗುಡ್ಡಳ್ಳಿ ಜನರ ಗೋಳು, ಜೋಲಿಯೇ ಆಂಬ್ಯುಲೆನ್ಸ್: ರಸ್ತೆ ನಿರ್ಮಾಣಕ್ಕೆ ಗ್ರಾಮಸ್ಥರ ಆಗ್ರಹ - No Road For Village