ಬೆಂಗಳೂರು: ನಮ್ಮ ಪರ ನಿಲ್ಲುವ ಸಮುದಾಯ ಯಾವುದು ಅಂತ ನೋಡಿ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಆಯ್ಕೆ ನಿರ್ಧಾರ ಮಾಡುತ್ತೆ ಎಂದು ಸಚಿವ ಜಿ.ಪರಮೇಶ್ವರ್ ತಿಳಿಸಿದರು. ಸದಾಶಿವನಗರ ನಿವಾಸದ ಬಳಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿ, ಬೇರೆ ಬೇರೆ ಸಮುದಾಯದವರು ಸ್ಥಾನ ಕೇಳೋದು ತಪ್ಪಲ್ಲ. ಆದರೆ ನಮ್ಮ ಪರ ನಿಲ್ಲುವ ಸಮುದಾಯ ಯಾವುದು ಅಂತ ನೋಡಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದರು.
ಹೈಕಮಾಂಡ್ಗೆ ಯಾರಿಗೆ, ಯಾವ ಸಮುದಾಯಕ್ಕೆ ಕೊಡಬೇಕು ಅಂತ ಗೊತ್ತಿದೆ. ಆದರೆ ಬದಲಾವಣೆ ಚರ್ಚೆ ಬಗ್ಗೆ ನನಗೆ ಗೊತ್ತಿಲ್ಲ. ಹೈಕಮಾಂಡ್ ಏನು ಮಾಡುತ್ತೋ ಗೊತ್ತಿಲ್ಲ. ಶಾಸಕರು, ಮುಖಂಡರು ತಮ್ಮ ಅಭಿಪ್ರಾಯ ಹೇಳ್ತಾರೆ ಇದರಲ್ಲಿ. ಇವರ ಅಭಿಪ್ರಾಯಗಳೂ ಮುಖ್ಯ. ಡಿ.ಕೆ. ಶಿವಕುಮಾರ್ ಅವರು ಎರಡು ಪ್ರಮುಖ ಖಾತೆಗಳನ್ನು ಹೊಂದಿದ್ದಾರೆ. ಅದಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಅದರ ಜೊತೆಗೆ ಕೆಪಿಸಿಸಿ ಅಧ್ಯಕ್ಷರಾಗಿನೂ ಗಮನ ಕೊಡಬೇಕು ಎಂದರು.
ಎರಡು ಹುದ್ದೆಗಳನ್ನು ನಿಭಾಯಿಸುವುದು ಕಷ್ಟ ಎಂಬುದು ಡಿ.ಕೆ.ಶಿವಕುಮಾರ್ಗೂ ಗೊತ್ತು. ಹಾಗಾಗಿ ಹೈಕಮಾಂಡ್ ಸರಿಯಾದ ಸಮಯದಲ್ಲಿ ಬದಲಾವಣೆ ಮಾಡುತ್ತಾರೆ ಎಂಬುದು ಅವರಿಗೆ ಗೊತ್ತು. ಆ ತರ ಏನಾದರೂ ಇದ್ದರೆ ಹೈಕಮಾಂಡ್ ವೀಕ್ಷಕರನ್ನು ಕಳಿಸಿ ಅಭಿಪ್ರಾಯ ಸಂಗ್ರಹ ಮಾಡುತ್ತೆ. ಈಗ ಬಿಜೆಪಿಯಲ್ಲಿ ನಡ್ಡಾ ಅವರು ರಾಷ್ಟ್ರೀಯ ಅಧ್ಯಕ್ಷರಾಗಿದ್ರು. ಈಗ ನಡ್ಡಾ ಸಚಿವರಾಗಿದ್ದಾರೆ, ಅವರ ಸ್ಥಾನಕ್ಕೆ ಬೇರೆಯವರನ್ನು ಕರೆತರುವ ಚರ್ಚೆ ಆಗ್ತಿದೆ. ಇದರಲ್ಲಿ ವಿಶೇಷತೆ ಏನಿಲ್ಲ. ಹೈಕಮಾಂಡ್ಗೆ ಇಲ್ಲಿ ಅಧ್ಯಕ್ಷರನ್ನು ಬದಲಾಯಿಸಬೇಕು ಅಂತ ಅನಿಸಿದರೆ ಬದಲಾಯಿಸ್ತಾರೆ. ನಾವು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರನ್ನೂ ಭೇಟಿ ಮಾಡಿದ್ದೆವು. ರಾಜಕೀಯವಾಗಿ ಚರ್ಚೆ ಮಾಡಲಾಯಿತು. ಸೌಹಾರ್ದಯುತವಾಗಿ ಚರ್ಚೆ ಮಾಡಲಾಯ್ತು. ಹೆಚ್ಚುವರಿ ಡಿಸಿಎಂ ಬಗ್ಗೆ ಯಾರೂ ಪ್ರಸ್ತಾಪ ಮಾಡಲಿಲ್ಲ ಎಂದರು.
ಹೆಚ್ಚುವರಿ ಡಿಸಿಎಂ ಬಗ್ಗೆ ಅವರವರು ಅವರವರ ಅಭಿಪ್ರಾಯ ಹೇಳ್ತಾರೆ. ಆದ್ರೆ ಎಲ್ಲವೂ ಹೈಕಮಾಂಡ್ಗೆ ಬಿಟ್ಟಿದ್ದು. ಸ್ವಾಮೀಜಿಗಳು ವೇದಿಕೆ, ಸಂದರ್ಭ ನೋಡಿ ಮಾತಾಡಿದ್ರೆ ಒಳ್ಳೆಯದು. ಸ್ವಾಮೀಜಿಗಳ ಹೇಳಿಕೆ ತಪ್ಪು ಅಂತ ಹೇಳಕ್ಕಾಗಲ್ಲ, ಅವರಿಗೂ ಕಾಳಜಿ ಇರಬಹುದು, ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಸಿಎಂ, ಡಿಸಿಎಂ ಹುದ್ದೆಗಳ ವಿಚಾರ ಪ್ರಸ್ತುತ ಅಪ್ರಸ್ತುತ ಅಂತ ಅಲ್ಲ. ಹೈಕಮಾಂಡ್ ನವರು ಆ ತರ ಬದಲಾವಣೆ ಮಾಡೋದಾದರೆ ವೀಕ್ಷಕರನ್ನು ಕಳಿಸಿ ಅಭಿಪ್ರಾಯ ಪಡೆಯುತ್ತಾರೆ ಎಂದರು.