ಸಚಿವ ಎನ್.ಚಲುವರಾಯಸ್ವಾಮಿ (ETV Bharat) ಬೆಂಗಳೂರು: ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ಬಿಟ್ಟುಕೊಡಬೇಕೆಂಬ ವಿಚಾರ ಒಂದೆಡೆಯಾದರೆ, ಮತ್ತೊಂದೆಡೆ ಲಿಂಗಾಯತರು ಸಿಎಂ ಆಗಬೇಕೆಂಬ ಕೂಗೆದ್ದಿದೆ. ಡಿ.ಕೆ.ಶಿವಕುಮಾರ್ಗೆ ಸಿಎಂ ಸ್ಥಾನ ಬಿಟ್ಟುಕೊಡಿ ಎಂಬ ಚಂದ್ರಶೇಖರನಾಥ ಸ್ವಾಮೀಜಿ ಹೇಳಿಕೆ ಹಾಗೂ ಲಿಂಗಾಯತರು ಸಿಎಂ ಆಗಬೇಕು ಎಂಬ ಶಿವಾಚಾರ್ಯ ಶ್ರೀಗಳ ಹೇಳಿಕೆಯ ವಿಚಾರಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಸ್ವಾಮೀಜಿಗಳ ಹೇಳಿಕೆಯ ಹಿಂದೆ ವಿರೋಧ ಪಕ್ಷಗಳ ಕೈವಾಡ ಇರಬಹುದು ಎಂದು ಹೇಳಿದ್ದಾರೆ.
ಕೃಷಿ ಇಲಾಖೆ ಆವರಣದಲ್ಲಿ ಇಂದು ಹಮ್ಮಿಕೊಂಡಿದ್ದ ಒಂದು ದಿನದ ರಾಜ್ಯ ಮಟ್ಟದ ಕಾರ್ಯಾಗಾರ ಕಾರ್ಯಕ್ರಮ ಉದ್ಘಾಟನೆಗೂ ಮುನ್ನ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ರಾಜ್ಯದ ಸಮಯ ಸರಿಯಿಲ್ಲ ಅನಿಸುತ್ತದೆ ಅಥವಾ ಯಾರದ್ದೋ ಕೈವಾಡ ಇರಬಹುದು. ಸರ್ಕಾರ ಚೆನ್ನಾಗಿ ನಡೆಯುತ್ತಿದೆ. ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳು ಜಾರಿಯಾಗುತ್ತಿವೆ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ 25 ಸ್ಥಾನಗಳನ್ನು ಗೆದ್ದಿದ್ದ ಬಿಜೆಪಿ ಈ ಬಾರಿ ಕೇವಲ 17ರಲ್ಲಿ ಮಾತ್ರ ಗೆದ್ದಿದೆ. ಇದರಿಂದ ಅವರು ಸ್ವಲ್ಪ ಶೇಕ್ ಆಗಿದ್ದಾರೆ ಎಂದರು.
ಸ್ವಾಮೀಜಿಗಳು ಇದನ್ನು ಸಾರ್ವಜನಿಕವಾಗಿ ಹೇಳುವ ಅವಶ್ಯಕತೆ ಇಲ್ಲ. ಹೈಕಮಾಂಡ್ ಬಳಿ ಮಾತನಾಡಬಹುದು. ಸಿದ್ದರಾಮಯ್ಯ ಹಾಗು ಡಿ.ಕೆ.ಶಿವಕುಮಾರ್ ಅವರೊಂದಿಗೆ ಮಾತನಾಡಬಹುದು. ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡಬೇಕು. ಇನ್ನು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಹಳ ಚೆನ್ನಾಗಿದ್ದಾರೆ. ಅವರಿಬ್ಬರ ನಡುವೆ ಹೊಂದಾಣಿಕೆಯೂ ಚೆನ್ನಾಗಿದೆ. ಹೈಕಮಾಂಡ್ ಸಹ ಅವರಿಬ್ಬರನ್ನು ಕೂರಿಸಿಕೊಂಡು ಚರ್ಚೆ ಮಾಡುತ್ತದೆ. ಹೈಕಮಾಂಡ್ ಯಾವಾಗ ತೀರ್ಮಾನ ಮಾಡಬೇಕೋ ಆಗ ಮಾಡ್ತಾರೆ. ಸ್ವಾಮೀಜಿಗಳು ಅವರ ಅಭಿಪ್ರಾಯ ಹೇಳಿದ್ದಾರೆ. ಆದರೆ ಹೇಳುವ ವೇದಿಕೆ ಅದಲ್ಲ ಎನ್ನುವ ಚರ್ಚೆಯಿದೆ. ಸ್ವಾಮೀಜಿಗಳಿಗೆ ಅಲ್ಲಿ, ಇಲ್ಲಿ ಮಾತಾಡಿ ಎಂದು ನಾವು ನಿರ್ದೇಶನ ನೀಡಲು ಆಗುವುದಿಲ್ಲ. ಅವರ ಭಾವನೆಗೆ ತಕ್ಕಂತೆ ಹೇಳಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಸ್ವಾಮೀಜಿಗಳಿಗೂ ರಾಜಕೀಯಕ್ಕೂ ಯಾವುದೇ ಸಂಬಂಧವಿಲ್ಲ: ಸಚಿವ ವೆಂಕಟೇಶ್ - Minister K Venkatesh