ಬೆಂಗಳೂರು/ ದಕ್ಷಿಣ ಕೊರಿಯಾ : ಅತ್ಯಾಧುನಿಕ ಕಟಿಂಗ್ ಟೂಲ್ಸ್ ತಯಾರಿಸುವ ದಕ್ಷಿಣ ಕೊರಿಯಾದ ಜಾಗತಿಕ ಕಂಪನಿಯಾಗಿರುವ ವೈಜಿ-1, ಕರ್ನಾಟಕದಲ್ಲಿ 1,245 ಕೋಟಿ ರೂ. ಬಂಡವಾಳ ಹೂಡಿಕೆ ಮಾಡುವುದಾಗಿ ಪ್ರಕಟಿಸಿದೆ.
ಬಂಡವಾಳ ಹೂಡಿಕೆ ಆಕರ್ಷಿಸಲು ದಕ್ಷಿಣ ಕೊರಿಯಾಕ್ಕೆ 5 ದಿನಗಳ ಭೇಟಿ ನೀಡಿರುವ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗದ ಜೊತೆಗೆ ಇಂದು ನಡೆದ ಸಮಾಲೋಚನೆ ಸಂದರ್ಭದಲ್ಲಿ ಕಂಪನಿಯು ಈ ಘೋಷಣೆ ಮಾಡಿದೆ.
ಕರ್ನಾಟಕದಲ್ಲಿ ಕೊರಿಯಾ ಭಾಷೆ ಕಲಿಸುವ ಮತ್ತು ತರಬೇತಿ ನೀಡುವ ಕೇಂದ್ರ, ಇಂಧನ ಆವಿಷ್ಕಾರ ಮತ್ತು ತಂತ್ರಜ್ಞಾನ ಪ್ರಗತಿ ಕ್ಷೇತ್ರಗಳಲ್ಲಿ ಅತ್ಯಾಧುನಿಕ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ (ಆರ್‌ಆ್ಯಂಡ್‌ಡಿ) ಸ್ಥಾಪಿಸಲಾಗುವುದು ಎಂದು ಕಂಪನಿಯ ಚೇರ್ಮನ್ ಹೊ ಕ್ಯೂನ್ ಸಾಂಗ್ ಅವರು ತಿಳಿಸಿದ್ದಾರೆ.
'ಐಟಿ, ಎಲೆಕ್ಟ್ರಾನಿಕ್ ಸಿಸ್ಟಮ್ಸ್, ವೈಮಾಂತರಿಕ್ಷ ಹಾಗೂ ರಕ್ಷಣೆಗೆ ಸಂಬಂಧಿಸಿದ ಉದ್ದಿಮೆಗಳಲ್ಲಿ ಕರ್ನಾಟಕವು ಭಾರತದಲ್ಲಿ ಮೊದಲ ಸ್ಥಾನದಲ್ಲಿ ಇರುವುದನ್ನು ಸಚಿವ ಪಾಟೀಲ ಅವರು ಕೊರಿಯಾದ ಕಂಪನಿಗಳಿಗೆ ಮನವರಿಕೆ ಮಾಡಿಕೊಟ್ಟರು. ಸೌರಶಕ್ತಿಯೂ ಸೇರಿದಂತೆ ರಾಜ್ಯವು ವಿಪುಲ ಪ್ರಮಾಣದಲ್ಲಿ ನೈಸರ್ಗಿಕ ಸಂಪನ್ಮೂಲ ಹೊಂದಿದೆ. ವಿದ್ಯುತ್ ಚಾಲಿತ ವಾಹನ, ಎಲೆಕ್ಟ್ರಾನಿಕ್ಸ್ ಮತ್ತು ಸ್ಮಾರ್ಟ್‌ಫೋನ್ ತಯಾರಿಕೆಗೆ ರಾಜ್ಯ ಸರ್ಕಾರವು ಗರಿಷ್ಠ ಪ್ರಮಾಣದಲ್ಲಿ ಉತ್ತೇಜನ ನೀಡುತ್ತಿದೆ' ಎಂದು ಹೇಳಿದ್ದಾರೆ.