ಬೆಂಗಳೂರು :ಎರಡನೇ ವಿಮಾನ ನಿಲ್ದಾಣದ ಬಗ್ಗೆ ಯಾವುದೇ ಗೊಂದಲಗಳಿಲ್ಲ. ಈಗಾಗಲೇ ಶಾರ್ಟ್ ಲಿಸ್ಟ್ ಮಾಡಿದ್ದೇವೆ ಎಂದು ಕೈಗಾರಿಕಾ ಸಚಿವ ಎಂ. ಬಿ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ನಾಲ್ಕು ಕಡೆ ಜಾಗಗಳನ್ನು ಗುರುತಿಸಿದ್ದು, ಅದರಲ್ಲಿ ವಿಶೇಷವಾಗಿ ಎರಡು ಜಾಗಗಳ ಕುರಿತು ಮುಖ್ಯಮಂತ್ರಿಗಳ ಜೊತೆ ಒಂದು ರೌಂಡ್ ಸಮಾಲೋಚನೆ ಮಾಡಿದ್ದೇವೆ. ಇನ್ನೊಂದು ರೌಂಡ್ ಚರ್ಚೆ ಮಾಡುತ್ತೇವೆ. ಸಾಧ್ಯವಾದರೆ ಗ್ಲೋಬಲ್ ಇನ್ವೆಸ್ಟ್ ಮೀಟ್ಗಿಂತ ಮೊದಲು ಅಥವಾ ಗ್ಲೋಬಲ್ ಇನ್ವೆಸ್ಟ್ ಮೀಟ್ ಮುಗಿದು ಒಂದೆರಡು ದಿನಗಳಲ್ಲಿ ಏರ್ ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಪ್ರಸ್ತಾವನೆ ಕಳುಹಿಸುತ್ತೇವೆ. ಯಾವುದೇ ಗೊಂದಲ ಬೇಡ, ಈ ಬಗ್ಗೆ ನಾನೇ ಖದ್ದು ಮಾನಿಟರ್ ಮಾಡುತ್ತಿದ್ದೇನೆ ಎಂದರು.
ಸಚಿವ ಎಂ ಬಿ ಪಾಟೀಲ್ ಅವರು ಮಾತನಾಡಿದರು (ETV Bharat) ಎರಡನೇ ವಿಮಾನ ನಿಲ್ದಾಣ ಎಲ್ಲಿ ಆಗಬೇಕೆಂಬುದು ರಾಜ್ಯದ ಹಿತದೃಷ್ಟಿಯಿಂದ, ಜನತೆ, ವ್ಯಾಪಾರದ ದೃಷ್ಟಿಯಿಂದ ಮಾಡುತ್ತೇವೆ. ಆನ್ ಮೆರಿಟ್ ಬೇಸ್ ಆಗುತ್ತದೆ. ಈ ವಿಷಯದಲ್ಲಿ ಯಾವುದೇ ರಾಜಕೀಯ ನಿರ್ಧಾರವಾಗುವುದಿಲ್ಲ ಎಂದು ಹೇಳಿದರು.
ಎರಡನೇ ಏರ್‌ಪೋರ್ಟ್ ನಿರ್ಮಾಣ ವಿಚಾರದಲ್ಲಿ ಕ್ರೆಡಿಟ್ ವಾರ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಎರಡನೇ ವಿಮಾನ ನಿಲ್ದಾಣ ಮಾಡಲು ಹೊರಟ ನಾನೇ ಕ್ರೆಡಿಟ್ ತೆಗೆದುಕೊಳ್ಳಲು ಹೋಗಿಲ್ಲ. ರಾಜ್ಯದ ಜನರು ಕ್ರೆಡಿಟ್ ತೆಗೆದುಕೊಳ್ಳಬೇಕು. ಬೇರೆಯವರು ಯಾಕೆ ತೆಗೆದುಕೊಳ್ಳುತ್ತಾರೆ. ಇನ್ನೂ ಎಂಟು ವರ್ಷ ಇತ್ತು. ಯಾಕೆ ನಾನು ಆರಂಭಿಸೋದಕ್ಕೂ ಮೊದಲು ಯಾರಿಗೂ ಪ್ರತಿಷ್ಠೆ ಇರಲಿಲ್ಲವೇ?. 2033ರ ವರೆಗೆ ನಾವು ಸುಮ್ಮನೆ ಕುಳಿತುಕೊಳ್ಳಬಹುದಿತ್ತು. ಈಗ ನಾವು ಎರಡನೇ ಏರ್‌ಪೋರ್ಟ್ ಪ್ರಾರಂಭಿಸಿರುವುದು ಏಕೆಂದರೆ, ನಾವು ಈಗ ಪ್ರಾರಂಭ ಮಾಡಿದರೆ ಪೂರ್ಣಗೊಳ್ಳಲು 7-8 ವರ್ಷ ಬೇಕು. ಒಳ್ಳೆಯ ಉದ್ದೇಶ ಇಟ್ಟುಕೊಂಡು ನಾವು ಹೆಜ್ಜೆಯನ್ನು ಇಟ್ಟಿದ್ದೇವೆ. ನಾವು ಮೆರಿಟ್ ಮೇಲೆ, ಪ್ಯಾರಾ ಮೀಟರ್ ತೆಗೆದುಕೊಂಡು ಯಾವ ಜಾಗದಲ್ಲಿ ಮಾಡಬೇಕು ಅಂತಾ ನಿರ್ಧಾರ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.
ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ತುಮಕೂರು ಅಂತಾ ಹೇಳೋದು ತಪ್ಪಲ್ಲ. ಅದು ಅವರ ಹಕ್ಕು. ಮಾನದಂಡಗಳನ್ನು ಗುರುತಿಸಿ ನಾಲ್ಕು ಜಾಗಗಳನ್ನು ಗುರುತಿಸಿದ್ದೇವೆ. ಅದರಲ್ಲಿ ಎರಡು ಶಾರ್ಟ್ ಲಿಸ್ಟ್ ಮಾಡಿದ್ದೇವೆ. ಜಾಗತಿಕ ಹೂಡಿಕೆ ಸಮಾವೇಶ ಫೆ. 14 ಕ್ಕೆ ಮುಗಿಯುತ್ತದೆ. ಫೆ. 17ರ ಒಳಗಾಗಿ ಎರಡನೇ ಏರ್‌ಪೋರ್ಟ್ ಸ್ಥಳದ ಬಗ್ಗೆ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾಗೆ ಕಳುಹಿಸಿದ ಪ್ರಪೋಸಲ್ ಬಗ್ಗೆ ತಿಳಿಸುತ್ತೇವೆ ಎಂದು ಹೇಳಿದರು.
ಒಂದೋ, ಎರಡೋ ಪ್ರಪೋಸಲ್ ತಿಳಿಸುತ್ತೇವೆ. ನಂತರ ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ ಬಂದು ಸ್ಕ್ರೀನ್ ಮಾಡಬೇಕು. ಎರಡನ್ನು ಓಕೆ ಅಂದ್ರೂ ಮುಂದೆ ಎಲ್ಲಿ ಮಾಡಬೇಕು ಅನ್ನೋದನ್ನು ನೋಡಬೇಕು. ಭೂಮಿ ಕೊಟ್ಟರೆ ಸಾಲದು, ಹೂಡಿಕೆದಾರರು ಬರಬೇಕು. ನಾನು ಬಿಜಾಪುರ ಅಂತೆನೇ, ಇನ್ವೆಸ್ಟರ್ಸ್ ಬರಬೇಕಲ್ಲ. ತೋರಿಸುವ ಜಾಗಕ್ಕೆ ಹೂಡಿಕೆದಾರರು ಬರಬೇಕು. ಪ್ಯಾಸೆಂಜರ್ ನೋಡುತ್ತಾರೆ. ಭೂಮಿಗೆ 10 ಸಾವಿರ ಕೋಟಿ ಬೇಕಾಗುತ್ತದೆ ಎಂದರು.
ಇದನ್ನೂ ಓದಿ :ಫೆಬ್ರವರಿ 11 ರಿಂದ 14ರ ವರೆಗೆ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ : ಸಚಿವ ಎಂ ಬಿ ಪಾಟೀಲ್ - MINISTER M B PATIL