ವಿಜಯಪುರ: ಯಾವ ಕಾರಣಕ್ಕೆ ತುಂಗಭದ್ರಾ ಜಲಾಶಯದ 19ನೇ ತುಂಗಭದ್ರಾ ಕ್ರಸ್ಟ್ ಗೇಟ್ ಚೈನ್ ಕಟ್ ಆಗಿದೆ ಎಂದು ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವರೂ ಆದ ಡಿ.ಕೆ. ಶಿವಕುಮಾರ್ ಅವರು ತಿಳಿದುಕೊಳ್ಳುತ್ತಾರೆ. ಇದು ಯಾವ ಕಾರಣಕ್ಕಾಗಿ ಆಯ್ತು ಹಾಗೂ ಟೆಕ್ನಿಕಲ್ ವಿಚಾರವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಡಿ. ಕೆ. ಶಿವಕುಮಾರ್ ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನವಲಿ ಬಳಿ ಟಿಬಿ ಡ್ಯಾಂ ಸಮಾನಾಂತರ ಜಲಾಶಯ ನಿರ್ಮಿಸಿದ್ದರೆ ನೀರು ಪೋಲು ಆಗುತ್ತಿರಲಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ, ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಅಂತರ್ ರಾಜ್ಯ ವಿವಾದಕ್ಕೊಳಪಟ್ಟಿದೆ. ಟಿಬಿ ಬೋರ್ಡ್ನಲ್ಲಿ ಎರಡು ರಾಜ್ಯಗಳ ಚರ್ಚೆಯೂ ಆಗಬೇಕಾಗುತ್ತದೆ. ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುತ್ತೆ. ನಾನು ಜಲಸಂಪನ್ಮೂಲ ಸಚಿವರೊಂದಿಗೆ ಮಾತನಾಡುತ್ತೇನೆ. ನವಲಿ ಬಳಿ ಟಿಬಿ ಸಮಾನಾಂತರ ಜಲಾಶಯ ನಿರ್ಮಾಣಕ್ಕೆ ಒತ್ತು ಕೊಡಬೇಕು ಅಂತ ಡಿ.ಕೆ. ಶಿವಕುಮಾರ್ ಅವರ ಜೊತೆಗೆ ಮಾತನಾಡುವೆ ಎಂದು ತಿಳಿಸಿದರು.
ನಿರ್ವಹಣೆ ಕೊರತೆಯಿಂದ ಟಿಬಿ ಡ್ಯಾಂ ಕ್ರಸ್ಟ್ ಗೇಟ್ ಚೈನ್ ಕಟ್ ಆಗಿದೆ ಎಂಬ ಆರೋಪದ ಬಗ್ಗೆ ಮಾತನಾಡಿ, ಸುಮ್ಮನೆ ಆರೋಪ ಮಾಡೋದು ಸರಿಯಲ್ಲ. ಏನಾಗಿದೆ ಅಂತ ನೋಡೋಣ. ಸದ್ಯ ಯಾಕೆ ಹೀಗಾಗಿದೆ ಅಂತ ಅರ್ಥ ಮಾಡಿಕೊಳ್ಳೋಣ. ಟಿಬಿ ಡ್ಯಾಂ ಘಟನೆಯಿಂದ ಇತರೆ ಜಲಾಶಯಗಳಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದು ಸರ್ಕಾರ ಮತ್ತು ಅಧಿಕಾರಿಗಳ ಜವಾಬ್ದಾರಿ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.