ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ವಿಜಯಪುರ, ಹಾಸನ ಸೇರಿ ವಿವಿಧ ವಿಮಾನ ನಿಲ್ದಾಣಗಳು ಮತ್ತು ಏರ್-ಸ್ಟ್ರಿಪ್ ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ಅಡಚಣೆಗಳು ಎದುರಾಗಿವೆ. ಇನ್ನೂ ಕೆಲ ಯೋಜನೆಗಳಿಗೆ ಅಗತ್ಯ ಪ್ರಮಾಣದ ಭೂಮಿ ಸಿಕ್ಕಿಲ್ಲ. ಇವೆಲ್ಲವನ್ನೂ ತ್ವರಿತವಾಗಿ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಚಿವ ಎಂ.ಬಿ.ಪಾಟೀಲ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, 219 ಕೋಟಿ ರೂ. ವೆಚ್ಚದಲ್ಲಿ 322 ಎಕರೆ ಜಾಗದಲ್ಲಿ ನಿರ್ಮಿಸಲು ಉದ್ದೇಶಿಸಿರುವ ರಾಯಚೂರು ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಕಾಮಗಾರಿ ಆರಂಭಕ್ಕೆ ತಾಂತ್ರಿಕ ಅಡಚಣೆಗಳಿದ್ದು, ತಕ್ಷಣ ಅವುಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸೂಚಿಸಿದರು. ಅಗತ್ಯ ಬಿದ್ದರೆ ದೆಹಲಿಗೂ ಹೋಗಿ ಬರಬೇಕು ಎಂದು ತಾಕೀತು ಮಾಡಿದರು.
ರಾಯಚೂರು ವಿಮಾನ ನಿಲ್ದಾಣ ಯೋಜನೆಗೆ ಈಗಾಗಲೇ ಡಿಪಿಆರ್ ಸಿದ್ಧವಾಗಿದೆ. ಯೋಜನೆಗೆ ಬೇಕಾಗಿರುವ ಪರಿಸರ ಇಲಾಖೆಯ ಅನುಮತಿಯನ್ನು ಕೂಡ ಬೇಗನೆ ಪಡೆಯಬೇಕು. ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಚುರುಕಾಗಿ ಮುಗಿಸಬೇಕು. ಭೂಸ್ವಾಧೀನದ ಸಮಸ್ಯೆ ಇದ್ದು, ತಕ್ಷಣ ಬಗೆಹರಿಸಲು ಸಚಿವರು ಸೂಚಿಸಿದರು.
ಉಡಾನ್ ಯೋಜನೆ ಸ್ಥಗಿತವಾಗಿರುವ ಕಾರಣ ಬೀದರ್ ವಿಮಾನ ನಿಲ್ದಾಣದಿಂದ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ಈ ಸಂಬಂಧ ವಿಮಾನಯಾನ ಸಂಸ್ಥೆಗಳ ಜತೆ ಮಾತುಕತೆ ನಡೆಸಿ, ಪರ್ಯಾಯ ಕ್ರಮಗಳ ಬಗ್ಗೆ ತೀರ್ಮಾನಿಸಬೇಕು. ಪುನಃ ಉಡಾನ್ ಯೋಜನೆ ಚಾಲನೆಗೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ತಕ್ಷಣ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದರು.