ಕೊಡಗು:ಸದ್ಯಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬಜೆಟ್ ಡಬಲ್ ಆಗಿದೆ, ಆದರೆ ರಾಜ್ಯಕ್ಕೆ ಸಿಗಬೇಕಾದ ತೆರಿಗೆಯ ಪಾಲು ಹಿಂದಿನಷ್ಟೇ ಇದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಡಿಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನುದಾನ ಹಂಚಿಕೆಯಲ್ಲಿ ಕೇಂದ್ರದಿಂದ ಅನ್ಯಾಯ ಆಗುತ್ತಿದೆ ಎಂದರು. 2017ರಲ್ಲಿಕೇಂದ್ರ ಬಜೆಟ್ 24 ಲಕ್ಷ ಕೋಟಿ ಇತ್ತು. ಅಂದು ಕರ್ನಾಟಕಕ್ಕೆ 52 ಸಾವಿರ ಕೋಟಿ ರೂ. ಅನುದಾನ ಬಂದಿತ್ತು. ಇಂದು ಕೇಂದ್ರದ ಬಜೆಟ್ ಎರಡು ಪಟ್ಟು ಹೆಚ್ಚಾಗಿ 45 ಲಕ್ಷ ಕೋಟಿ ಆಗಿದೆ. ಆದರೆ ಇಂದಿಗೂ ರಾಜ್ಯಕ್ಕೆ ಅದೇ 52 ರಿಂದ 53 ಸಾವಿರ ಕೋಟಿ ಅನುದಾನ ಬರುತ್ತಿದೆ" ಎಂದರು.
"ರಾಜ್ಯ ತೀವ್ರ ಬರಗಾಲ ಹಿನ್ನೆಲೆ ಕಳೆದ ವರ್ಷ ಸೆಪ್ಟೆಂಬರ್ 23ರಂದು ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೆವು. ಈಗ ನಾಲ್ಕೂವರೆ ತಿಂಗಳು ಕಳೆದರೂ ನಮ್ಮ ಮನವಿ ಬಗ್ಗೆ ತೀರ್ಮಾನವನ್ನು ಕೈಗೊಂಡಿಲ್ಲ, ಇಲ್ಲಿಯವರೆಗೂ ಒಂದು ಪೈಸೆ ಹಣವನ್ನು ಸಹ ಬಿಡುಗಡೆ ಮಾಡಿಲ್ಲ. ಕರ್ನಾಟಕದ ರೈತರು ಸಂಕಷ್ಟದಲ್ಲಿ ಇದ್ದಾರೆ, ಆದರೂ ಕೇಂದ್ರ ಸರ್ಕಾರ ರೈತರನ್ನು ನಿರ್ಲಕ್ಷ್ಯ ಮಾಡಿದೆ. ಮೇಕೆದಾಟು ಯೋಜನೆಗೆ ಒಪ್ಪಿಗೆ ಕೊಡಲು ಕ್ರಮ ತೆಗೆದುಕೊಂಡಿಲ್ಲ" ಎಂದು ಕೇಂದ್ರದ ವಿರುದ್ಧ ಹರಿಹಾಯ್ದರು.
"ಭದ್ರಾ ಮೇಲ್ದಂಡೆ ಯೋಜನೆಗೆ ಕಳೆದ ಬಜೆಟ್ನಲ್ಲಿ 5,300 ಕೋಟಿ ಘೋಷಿಸಲಾಗಿತ್ತು. ಇದುವರೆಗೆ ಒಂದು ಪೈಸೆ ಸಹ ಬಿಡುಗಡೆ ಮಾಡಿಲ್ಲ. ಮಹದಾಯಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆಯಿಂದ ಕ್ಲಿಯರೆನ್ಸ್ ದೂರೆತಿಲ್ಲ. ಇವೆಲ್ಲಾ ವಿಷಯಗಳನ್ನು ನೋಡಿದರೆ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡುತ್ತಿರುವುದು ಸ್ಪಷ್ಟವಾಗುತ್ತದೆ. ಇದು ಕರ್ನಾಟಕ ರಾಜ್ಯವೊಂದರ ಅಭಿಪ್ರಾಯ ಅಲ್ಲ, ಕೇರಳ ಸರ್ಕಾರವೂ ದೆಹಲಿಯಲ್ಲಿ ಪ್ರತಿಭಟನೆಗೆ ನಿರ್ಧರಿಸಿದೆ. ತಮಿಳುನಾಡಿನವರೂ ಫೆಬ್ರವರಿ 8 ರಂದು ದೆಹಲಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಈಗಾಗಲೇ ಕೋಲ್ಕತ್ತಾದಲ್ಲಿ ಪ್ರತಿಭಟನೆ ಮಾಡಿದೆ" ಎಂದು ಹೇಳಿದರು.
ಮನಮೋಹನ್ ಸಿಂಗ್ ಸರ್ಕಾರಕ್ಕಿಂತ 2 ಲಕ್ಷ ಕೋಟಿ ಅನುದಾನವನ್ನು ನಮ್ಮ ಸರ್ಕಾರ ರಾಜ್ಯಕ್ಕೆ ಕೊಟ್ಟಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ, "ಇಡೀ ದೇಶದಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ರಾಜ್ಯ ಕರ್ನಾಟಕ. ಹೊರದೇಶಗಳಿಂದ ಡಾಲರ್ ನಲ್ಲಿ ಆದಾಯ ತಂದು ಕೊಡುವುದರಲ್ಲಿ ರಾಜ್ಯವೇ ಮೊದಲಿದೆ. ಇಷ್ಟೆಲ್ಲಾ ಕೊಡುಗೆಯನ್ನು ದೇಶಕ್ಕೆ ಕೊಟ್ಟಿದ್ದೇವೆ. ಈ ಬಗ್ಗೆ ಅಂಕಿ - ಸಂಖ್ಯೆಯನ್ನು ವಿಧಾನಸಭೆ ಅಧಿವೇಶನದಲ್ಲಿ ನೀಡುತ್ತೇವೆ. ಯಾರು ಬೇಕಾದರೂ ಬಂದು ಚರ್ಚಿಸಲಿ" ಎಂದು ಸವಾಲು ಹಾಕಿದರು.
ಇದನ್ನೂ ಓದಿ:ಕೇಂದ್ರದ ಅನುದಾನ ತಾರತಮ್ಯದಿಂದ ರಾಜ್ಯಕ್ಕೆ 1,87,867 ಕೋಟಿ ರೂ. ನಷ್ಟವಾಗಿದೆ: ಸಿಎಂ ಸಿದ್ದರಾಮಯ್ಯ