ಬೆಂಗಳೂರು: ರಾಜ್ಯಾದ್ಯಂತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ತಮಗೆ ಮಂಜೂರಾಗಿರುವ ಜಮೀನುಗಳನ್ನು ಪರಭಾರೆ ಮಾಡಲು ಸರ್ಕಾರದ ಅನುಮತಿ ಕೋರಿ ಕಳೆದ ಮೂರು ವರ್ಷಗಳಿಂದ ಸಲ್ಲಿಕೆಯಾಗಿದ್ದ 625 ಪ್ರಸ್ತಾವನೆಗಳಲ್ಲಿ 408 ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಶಾಸಕ ಎಸ್.ಎನ್.ನಾರಾಯಣ ಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 217 ಪ್ರಸ್ತಾವನೆಗಳಿಗೆ ವಿವರಣೆ ಕೋರಿ ಜಿಲ್ಲಾಧಿಕಾರಿಗಳಿಗೆ ಹಿಂದಿರುಗಿಸಲಾಗಿದೆ. ವಿವಿಧ ಟ್ರಸ್ಟ್, ಶಾಲೆಗಳಿಗೆ ಹಾಗೂ ಇತರೆ ಉದ್ದೇಶಕ್ಕಾಗಿ ಜಮೀನು ಮಂಜೂರಾತಿ ಕೋರಿ ಸರ್ಕಾರಕ್ಕೆ 131 ಪ್ರಸ್ತಾವನೆಗಳು ಬಂದಿವೆ. ಈ ಪೈಕಿ 62 ಪ್ರಸ್ತಾವನೆ ಮಂಜೂರು ಮಾಡಿದ್ದು, 25 ಪ್ರಸ್ತಾವನೆಗಳನ್ನು ತಿರಸ್ಕರಿಸಲಾಗಿದೆ. 24 ಪ್ರಸ್ತಾವನೆಗಳನ್ನು ವಿವರಣೆ ಕೋರಿ ವಾಪಸ್ ನೀಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಸರ್ಕಾರದಿಂದ ಜಮೀನು ಮಂಜೂರು ಆದವರಿಗೆ ಪರಭಾರೆ ಆಗಬಾರದೆಂದು ಸರ್ಕಾರದ ಆಶಯ ಎಂದರು.
ಕೊಟ್ಟಿರುವ ಜಮೀನನ್ನು ಕಳೆದುಕೊಂಡರೆ ಮತ್ತೆ ಬಡತನಕ್ಕೆ ಸಿಲುಕುತ್ತಾರೆ. ಹೀಗಾಗಿ ಅನುಮತಿ ನೀಡುವಾಗ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ. ಪರಭಾರೆಗೆ ಅನುಮತಿ ಪಡೆಯಲು ಮೂಲ ಮಂಜೂರುದಾರರ ಪರವಾಗಿ ಅಂದರೆ ಯಾರದೋ ಜಮೀನಿಗೆ ಇನ್ಯಾರದೋ ಅನುಮತಿ ಕೋರುತ್ತಾರೆ. ಹೀಗಾಗಿ ನಾನು ಕಂದಾಯ ಇಲಾಖೆ ಹೊಣೆ ವಹಿಸಿಕೊಂಡ ನಂತರ ಸುದೀರ್ಘ ನಿಯಮಾವಳಿಯನ್ನು ರೂಪಿಸಿ ಚೆಕ್ ಲಿಸ್ಟ್ ನೀಡಲಾಗಿದೆ.
ನೂರಕ್ಕೂ ಹೆಚ್ಚು ಅನುಮತಿಯನ್ನು ಒಂದು ವರ್ಷದಲ್ಲೇ ನೀಡಲಾಗಿದೆ. ನಿಯಮಬದ್ಧವಾಗಿ ಪರಭಾರೆ ಆಗಬೇಕೆಂಬುದಷ್ಟೇ ಉದ್ದೇಶ. ಕೆಲವು ಕಡತಗಳಲ್ಲಿ ಮೂಲ ಮಂಜೂರಾತಿ ದಾಖಲಾತಿ ಇರುವುದಿಲ್ಲ. ಕೋರ್ಟ್ ಕೇಸ್ ಬಾಕಿ ಇರುತ್ತವೆ, ವಂಶವೃಕ್ಷ ಇಲ್ಲದ ಪ್ರಸ್ತಾವನೆಗಳು ಬರುತ್ತವೆ. ಈ ರೀತಿಯ ಕಡತಗಳನ್ನು ಹಿಂದಿರುಗಿಸಲಾಗುತ್ತದೆ. ಅಲ್ಲದೆ, ಸಮಾಜ ಕಲ್ಯಾಣ ಸಚಿವರು ಜಮೀನು ಪರಭಾರೆಯಾದರೆ ಬಡತನಕ್ಕೆ ಸಿಲುಕುತ್ತಾರೆ ಎಂಬ ಸಲಹೆ ನೀಡಿದ್ದಾರೆ ಎಂದು ಹೇಳಿದರು.
ಇದಕ್ಕೂ ಮುನ್ನ ಮಾತನಾಡಿದ ಶಾಸಕ ನಾರಾಯಣಸ್ವಾಮಿ, ಜಿಲ್ಲಾಧಿಕಾರಿಗಳು ಐಎಎಸ್ ಅಧಿಕಾರಿಗಳೇ, ಕಂದಾಯ ಇಲಾಖೆ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳೂ ಐಎಎಸ್ ಅಧಿಕಾರಿಗಳೇ. ಜಿಲ್ಲಾಧಿಕಾರಿಯಿಂದ ಶಿಫಾರಸಾದ ಪ್ರಸ್ತಾವನೆಯನ್ನು ತಿರಸ್ಕರಿಸುವುದೇಕೆ?, ಅರ್ಹವಲ್ಲದಿದ್ದರೆ ಕೆಳಮಟ್ಟದಲ್ಲೇ ವಜಾ ಮಾಡಿ. ಬಡವರಿಗೆ ಈ ಸರ್ಕಾರದಲ್ಲಿ ಅನುಕೂಲವಾಗುತ್ತಿಲ್ಲ. ಸಚಿವರನ್ನು ಅಧಿಕಾರಿಗಳು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.