ಬೆಂಗಳೂರು :ಕೇಂದ್ರದಿಂದ ಬಿಡುಗಡೆಯಾದ NDRF ಹಣದ ಪೈಕಿ ಒಟ್ಟು 32.12 ಲಕ್ಷ ರೈತರ ಖಾತೆಗೆ ಈವರೆಗೆ ಸಂಪೂರ್ಣ ಬೆಳೆ ಪರಿಹಾರ ಜಮೆ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಪರಿಹಾರ ಹಣ ಬಿಡುಗಡೆ ಆದ ಕೂಡಲೇ ರೈತರಿಗೆ ಅರ್ಹತೆ ಪ್ರಕಾರ ಪರಿಹಾರ ಪಾವತಿಸಲಾಗಿದೆ. ಇಲ್ಲಿಯವರೆಗೆ ಮೊದಲ ಹಂತದಲ್ಲಿ 2000 ರೂ. ಮತ್ತು ಎರಡನೇ ಕಂತಿನ ಪರಿಹಾರವೂ ಸೇರಿದಂತೆ ಒಟ್ಟು 32.12 ಲಕ್ಷ ರೈತರ ಖಾತೆಗೆ ಈ ದಿನದವರೆಗೆ ಸಂಪೂರ್ಣ ಬೆಳೆ ಪರಿಹಾರ ಜಮಾ ಮಾಡಲಾಗಿದೆ. ಇನ್ನೂ ಸುಮಾರು 2 ಲಕ್ಷ ರೈತರಿಗೆ ಪರಿಹಾರ ನೀಡುವ ಪ್ರಕ್ರಿಯೆ ದಾಖಲೆ ಪರಿಶೀಲನೆ ಹಂತದಲ್ಲಿದೆ ಎಂದರು.
ಇದಲ್ಲದೇ ಸುಮಾರು ತಾಲೂಕುಗಳಲ್ಲಿ ಬರ ಪರಿಹಾರ ಪಟ್ಟಿಯಲ್ಲಿ ಸೇರದೆ ಇದ್ದ ಮಳೆ ಆಧಾರಿತ ಬೆಳೆಗಳಿಗೂ ಪರಿಹಾರ ಧನ ವಿತರಿಸಲು ಮತ್ತು 2 ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶವನ್ನು ಒಳಗೊಳ್ಳುವ ಸುಮಾರು 1.63 ಲಕ್ಷ ಅರ್ಹ ರೈತರಿಗೂ ಪರಿಹಾರ ವಿತರಿಸಲು ತೀರ್ಮಾನಿಸಲಾಗಿದೆ. ಇದಕ್ಕೆ 400-500 ಕೋಟಿ ರೂ. ಪರಿಹಾರ ನೀಡಬೇಕಿದೆ. 10 ದಿನಗಳಲ್ಲಿ ಈ ಪ್ರಕ್ರಿಯೆ ನಡೆಯಲಿದೆ. ಇದೆಲ್ಲಾ ಸೇರಿ ಎನ್‌ಡಿಆರ್‌ಎಫ್ ಹಣ 3,450 ಕೋಟಿ ರೂ. ಸೇರಿ, ಒಟ್ಟು 4,300 ಕೋಟಿ ಪರಿಹಾರ ಕೊಟ್ಟಂತೆ ಆಗುತ್ತೆ ಎಂದರು.
ಯಾವ ಬೆಳೆಗೆ ಎಷ್ಟು ಪರಿಹಾರ? :ಎನ್‌ಡಿಆರ್‌ಎಫ್ ಮಾರ್ಗಸೂಚಿಯಂತೆ ಗರಿಷ್ಠ 2 ಹೆಕ್ಟೇರ್ ಪ್ರದೇಶದ ಮಿತಿಗೊಳಪಟ್ಟು ಬೆಳೆ ನಷ್ಟ ಪರಿಹಾರ ನಿಗದಿ ಮಾಡಲಾಗಿದೆ. ಅದರಂತೆ ಮಳೆಯಾಶ್ರಿತ ಬೆಳೆಗೆ 8,500 ರೂ. ನೀರಾವರಿ ಪ್ರದೇಶದ ಬೆಳೆಗೆ 17,000 ರೂ. ಮತ್ತು ದೀರ್ಘಾವಧಿ (ತೋಟಗಾರಿಕೆ) ಬೆಳೆಗೆ 22,500 ರೂ. ಪರಿಹಾರ ನೀಡಲಾಗುತ್ತಿದೆ.
ಈಗಾಗಲೇ ರಾಜ್ಯ ಸರ್ಕಾರ ಕಳೆದ ಜನವರಿಯಲ್ಲಿ ರೈತರಿಗೆ ಗರಿಷ್ಠ 2 ಸಾವಿರ ರೂ. ವರೆಗೆ ಮಧ್ಯಂತರ ಪರಿಹಾರ ಪಾವತಿಸಿದೆ. ರಾಜ್ಯದ 223 ಬರಪೀಡಿತ ತಾಲೂಕುಗಳ ಒಟ್ಟು 33,55,599 ರೈತರಿಗೆ 636.44 ಕೋಟಿ ರೂ. ಅನ್ನು ರಾಜ್ಯ ಸರ್ಕಾರ ಕಳೆದ ಜನವರಿ 22ರಂದು ಮಧ್ಯಂತರ ಪರಿಹಾರವಾಗಿ ಬಿಡುಗಡೆ ಮಾಡಿತ್ತು. ಈಗ ಆ ಮೊತ್ತ ಕಡಿತ ಮಾಡಿಕೊಂಡು ಎನ್ ಡಿಆರ್‌ಎಫ್ (ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ) ಮಾರ್ಗಸೂಚಿ ಅನ್ವಯ ನಿಗದಿಯಾದ ಬಾಕಿ ಮೊತ್ತ ಜಮಾ ಮಾಡಲಾಗುತ್ತಿದೆ. ಮೊದಲು ಕಂತು ಮತ್ತು ಎರಡು ಕಂತು ಸುಮಾರು 3,000 ಕೋಟಿ ರೂ. ಹಣ ರೈತರ ಖಾತೆಗೆ ಜಮೆಯಾಗಿದೆ ಎಂದರು.