ಜೆಡಿಎಸ್ - ಬಿಜೆಪಿ ವಿರುದ್ಧ ಕೃಷ್ಣ ಬೈರೇಗೌಡ ವಾಗ್ದಾಳಿ ಹಾವೇರಿ: ಹಾಸನ ಲೈಂಗಿಕ ಪ್ರಕರಣ ಕೇವಲ ಒಂದು ಸೆಕ್ಸ್ ಸ್ಕ್ಯಾಮ್ ಅಲ್ಲಾ ಇದು ರೇಪ್‌ಗೆ ಸಮಾನವಾದ ಲೈಂಗಿಕ ಶೋಷಣೆ ಎಂದು ಕೃಷ್ಣಬೈರೇಗೌಡ ಆರೋಪಿಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಅಮಾಯಕರ ದುರ್ಲಾಭ ಪಡೆದಿರುವಂತಹ ಇದನ್ನು ಸ್ಕ್ಯಾಮ್ ಅಂತಾ ಅಷ್ಟೇ ಕರೆಯಬೇಡಿ ಇದು ಅದಕ್ಕೂ ಮೀರಿರುವಂತಹದ್ದು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಠಿಣ ಕಾನೂನು ಇರುವಂತಹ ಪ್ರಕರಣ ಇದಾಗಿದೆ ಎಂದರು.
ಇದೇ ವೇಳೆ, ಬಿಜೆಪಿ ವಿರುದ್ದ ವಾಗ್ಧಾಳಿ ನಡೆಸಿದ ಸಚಿವರು, ನಿಮಗೇನಾದರೂ ಮಾನ ಮರ್ಯಾದೆ ಇದೆಯಾ, ಹಿಂದೂ ಮಹಿಳೆಯರ ತಾಳಿಯ ಬಗ್ಗೆ ಮಾತನಾಡುತ್ತೀರಿ, ಮನೆಯ ಮಾಂಗಲ್ಯದ ಬಗ್ಗೆ ಮಾತನಾಡುತ್ತೀರಿ. ಹಾಸನ ಜಿಲ್ಲೆಯಲ್ಲಿ ಒಬ್ಬ ಬಿಜೆಪಿಯ ಮುಖಂಡ ಡಿಸೆಂಬರ್‌ನಲ್ಲಿ ಪತ್ರ ಬರೆದು ಪ್ರಜ್ವಲ್ ರೇವಣ್ಣ ನೂರಾರು ಮಹಿಳೆಯರು ಜೀವನ ಹಾಳು ಮಾಡಿದ್ದಾರೆ. ಮಾಂಗಲ್ಯ ಕಿತ್ತು ಕೊಂಡಿದ್ದಾರೆ ಇವರಿಗೆ ಟಿಕೆಟ್ ಕೊಡಬೇಡಿ ಎಂದರೂ ಅವರಿಗೆ ಟಿಕೆಟ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲಾ ಹಿಂದೂ ಮಹಿಳೆಯರ ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಯೇ ಭಾಷಣ ಮಾಡುತ್ತಾರೆ. ಪ್ರಜ್ವಲ್ ರೇವಣ್ಣಗೆ ನೀಡುವ ಮತ ನನಗೆ ಹಾಕಿದ ಮತ ಎಂದು ಭಾಷಣ ಮಾಡುತ್ತಾರೆ. ಇವರ ಪರವಾಗಿ ಬಂದು ಮತ ಕೇಳುತ್ತಾರೆ
ಎಂದರೇ ನರೇಂದ್ರ ಮೋದಿ ಸಹ ಇದಕ್ಕೆ ಬೆಂಬಲಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇಲ್ಲಿ ಇಷ್ಟೊಂದು ಮಹಿಳೆಯರ ಮಾನಭಂಗವಾಗಿದೆ, ಮನೆಯನ್ನ ಹಾಳು ಮಾಡಿದ್ದಾರೆ ಮನೆಯನ್ನ ಒಡೆದಿದ್ದಾರೆ. ಬಿಜೆಪಿಯವರೇ ಹಿಂದೂ ಮಹಿಳೆಯರ ಬಗ್ಗೆ ಮಾತನಾಡುತ್ತೀರಿ ಮಾಂಗಲ್ಯದ ಬಗ್ಗೆ ಮಾತನಾಡುತ್ತೀರಿ ನಿಮಗೇನಾದರೂ ಮಾನ ಮರ್ಯಾದೆ ಇದೆಯಾ ಎಂದು ಗುಡುಗಿದರು. ಬಿಜೆಪಿ ನಾಯಕರು ಇದರ ಬಗ್ಗೆ ಇದುವರೆಗೊ ಒಂದೂ ಮಾತನ್ನೂ ಆಡಿಲ್ಲ ಸಮಜಾಯಿಸಿ ನೀಡುತ್ತೀರಿ, ಕೆಲಸಕ್ಕೆ ಬಾರದ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದು ದೂರಿದರು.
ಅವರ ತಂದೆ ಹೇಳುತ್ತಾರೆ ಇದು ನಾಲ್ಕು ವರ್ಷದ ಹಿಂದಿನದು ಎನ್ನುತ್ತಾರೆ. ನಾಲ್ಕು ವರ್ಷದ ಹಿಂದೆ ಮಾಡಿದರೆ ಕಾನೂನು ವ್ಯಾಪ್ತಿಗೆ ಬರುವುದಿಲ್ಲ. ಕೆಲವರು ಹೇಳುತ್ತಾರೆ ಉಪ್ಪುತಿಂದವನು ನೀರು ಕುಡಿಯಬೇಕು. ಮತ್ತೆ ಕೆಲವರು ಎಸ್ಐಟಿ ಮಾಡಿದ್ದು, ರಾಜಕೀಯ ಪ್ರೇರಿತ ಎನ್ನುತ್ತಾರೆ ಹಾಗಾದರೆ ಇದನ್ನು ಮುಚ್ಚಿಹಾಕಬೇಕಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದು ಪ್ರಪಂಚದ ಅತಿದೊಡ್ಡ ಲೈಂಗೀಕ ದೌರ್ಜನ್ಯ ಪ್ರಕರಣ. ಇಡೀ ಪ್ರಪಂಚದಲ್ಲಿ ಇಷ್ಟೊಂದು ಮಹಿಳೆಯರ ಮೇಲೆ ಲೈಂಗೀಕ ದೌರ್ಜನ್ಯ ಮಾಡಿರುವಂತಹ ಪ್ರಕರಣ ನಡೆದಿಲ್ಲ.
ಈ ಪ್ರಕರಣದಲ್ಲಿ ತೊಂದರೆಗೆ ಒಳಗಾದವರು ಹಿಂದೂ ಮಹಿಳೆಯರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದ ವರ್ಗದವರು, ದಲಿತ ಮಹಿಳೆಯರು ಎಲ್ಲ ಹಿಂದೂ ಮಹಿಳೆಯರೇ ಎಂದು ಆರೋಪಿಸಿದರು. ಇದರ ಬಗ್ಗೆ ಯಾಕೆ ಬಿಜೆಪಿಯವರಿಗೆ ಕಣ್ಣುಕಾಣುತ್ತಿಲ್ಲ ಇದರ ಬಗ್ಗೆ ಯಾಕೆ ಪ್ರಧಾನಿ ನರೇಂದ್ರ ಮೋದಿಗೆ ಕಣ್ಣುಕಾಣುತ್ತಿಲ್ಲ ಎಂದು ಪ್ರಶ್ನಿಸಿದರು. ಚುನಾವಣಾ ಲಾಭ ಬೇಕಾದಾಗ ಇವರಿಗೆ ಹಿಂದೂ ಮಹಿಳೆಯರು ಬೇಕು ಈ ರೀತಿ ಅನ್ಯಾಯವಾದಾಗ ಬಾಯಿ ಇಲ್ಲದಂತೆ ಬಾಯ್ಮುಚ್ಚಿಕೊಂಡು ನಾಟಕ ಮಾಡುತ್ತಿದ್ದರಲ್ಲಾ ಇದು ಡೊಂಗಿತನವಲ್ವಾ. ಮೂನ್ನೂರು ಮಹಿಳೆಯರ
ಮೇಲೆ ದೌರ್ಜನ್ಯ ಆದಾಗ ನ್ಯಾಯ ಕೇಳಿದರೆ ಅದು ರಾಜಕೀಯ ದುರ್ಲಾಭನಾ? ನ್ಯಾಯ ಕೇಳುವುದೇ ತಪ್ಪಾ?. ಇಷ್ಟು ದೊಡ್ಡ ಲೈಂಗಿಕ ಹಗರಣವಾಗಿದ್ದರೆ ಬಿಜೆಪಿ ಜೆಡಿಎಸ್‌ನವರು ಮತ್ತು ನರೇಂದ್ರ ಮೋದಿ ಮುಚ್ಚಿಹಾಕುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ಬಳಿ ಸಿಬಿಐ ಇದೆ, ಇಡಿ ಇದೆ, ತೆರಿಗೆ ಇಲಾಖೆ ಇದೆ. ದೇಶ ಬಿಟ್ಟು ಹೋಗಲು ಇವರು ಏಕೆ ಬಿಟ್ಟರು. ನರೇಂದ್ರ ಮೋದಿ ಸಹಕಾರವಿಲ್ಲದೆ ಅವರು ತಪ್ಪಿಸಿಕೊಂಡು ಹೋಗಲು ಸಾಧ್ಯವಾ. ಇಷ್ಟೊಂದು ಹಿಂದೂ ಮಹಿಳೆಯರ ಮೇಲೆ ಲೈಂಗೀಕ ದೌರ್ಜನ್ಯ ಎಸಗಿ ದೇಶ ಬಿಟ್ಟುಕಳಿಸಿ ಅವರಿಗೆ ರಕ್ಷಣೆ ನೀಡುತ್ತಿರುವವರು ಯಾರು. ಇಡೀ ಪ್ರಕರಣವನ್ನು ಮುಚ್ಚಿಹಾಕುವ ನೀಚ ಕೆಲಸವನ್ನ ಬಿಜೆಪಿಯವರು ಮಾಡುತ್ತಿರುವುದು ದೇಶಕ್ಕೆ ನಾಚಿಕೆಗೇಡು. ಪ್ರಪಂಚದಲ್ಲಿಯೇ ತಲೆತಗ್ಗಿಸುವಂತ ಮತ್ತು ಇಡೀ ದೇಶಕ್ಕೆ ಅವಮಾನ ಮಾಡುವಂತಹ ಕೆಲಸವನ್ನ ಬಿಜೆಪಿ ಮತ್ತು ಜೆಡಿಎಸ್ ಸೇರಿಕೊಂಡು ಮಾಡಿದ್ದಾರೆ. ದೇಶದ ಮಾನವನ್ನು ವಿದೇಶಗಳಲ್ಲಿ ಹರಾಜು ಹಾಕಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ:ನರೇಂದ್ರ ಮೋದಿ ಸುಳ್ಳುಗಾರ, ಹತ್ತು ವರ್ಷ ಸಂವಿಧಾನ ವಿರೋಧಿ ಆಡಳಿತ: ಸಿಎಂ ಸಿದ್ದರಾಮಯ್ಯ ಆಕ್ರೋಶ - CM Siddaramaiah