ಕರ್ನಾಟಕ

karnataka

By ETV Bharat Karnataka Team

Published : Feb 15, 2024, 4:11 PM IST

ETV Bharat / state

ಏಪ್ರಿಲ್ 1ರಿಂದ ಹೊಸ ಪಡಿತರ ಚೀಟಿಗೆ ಅರ್ಜಿ ಆಹ್ವಾನ: ಸಚಿವ ಕೆ.ಹೆಚ್.ಮುನಿಯಪ್ಪ

ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಹೊಸ ಅರ್ಜಿಗಳನ್ನು ಆಹ್ವಾನಿಸುವುದಕ್ಕೆ ಅವಕಾಶ ನೀಡಲಾಗುವುದು ಎಂದು ಸಚಿವ ಕೆ.ಹೆಚ್.ಮುನಿಯಪ್ಪ ವಿಧಾನಸಭೆಯಲ್ಲಿ ತಿಳಿಸಿದರು.

ಸಚಿವ ಕೆ ಹೆಚ್ ಮುನಿಯಪ್ಪ
ಸಚಿವ ಕೆ ಹೆಚ್ ಮುನಿಯಪ್ಪ

ವಿಧಾನಸಭೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಮಾತು

ಬೆಂಗಳೂರು:ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಸಲಾಗಿರುವ 2,95,986 ಅರ್ಜಿಗಳನ್ನು ಇದೇ ಮಾರ್ಚ್‌ 31ರೊಳಗೆ ವಿಲೇವಾರಿ ಮಾಡಿ ಏ.1ರಿಂದ ಹೊಸ ಅರ್ಜಿಗಳನ್ನು ಆಹ್ವಾನಿಸುವುದಕ್ಕೆ ಅವಕಾಶ ನೀಡಲಾಗುವುದು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಕೆ.ಹೆಚ್.ಮುನಿಯಪ್ಪ ವಿಧಾನಸಭೆಗೆ ಇಂದು ಮಾಹಿತಿ ನೀಡಿದ್ದಾರೆ.

ಶಾಸಕರಾದ ನಯನಾ ಮೋಟಮ್ಮ ಮತ್ತು ಯಶಪಾಲ್‌ ಸುವರ್ಣ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಹೊಸ ಆದ್ಯತಾ ಪಡಿತರ ಚೀಟಿ ಕೋರಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಪರಿಶೀಲಿಸಿ ವಿಲೇವಾರಿ ಮಾಡುವ ಕಾರ್ಯ ನಡೆಯುತ್ತಿದೆ. ಈವರೆಗೆ 57,651 ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 744 ಕಾರ್ಡ್‌ಗಳನ್ನು ವಿತರಿಸಲಾಗಿದೆ. ಬಾಕಿ ಉಳಿದಿರುವ ಹೊಸ ಆದ್ಯತಾ ಪಡಿತರ ಚೀಟಿಗಳನ್ನು ಪರಿಶೀಲಿಸಿ, ವಿಲೇವಾರಿ ಮಾಡಲು ಜಂಟಿ/ಉಪನಿರ್ದೇಶಕರುಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಈ ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಚುನಾವಣೆ ಹಾಗೂ ಇನ್ನಿತರ ಕಾರಣಗಳಿಂದ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗಿತ್ತು. ಅವುಗಳನ್ನು ವಿಲೇವಾರಿ ಮಾಡುವ ಕಾರ್ಯ ಪ್ರಗತಿಯಲ್ಲಿದೆ. ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ ಹೊಸದಾಗಿ ಆದ್ಯತಾ ಪಡಿತರ ಚೀಟಿ ಕೋರಿ ತಹಶೀಲ್ದಾರರ ಶಿಫಾರಸು ವರದಿ ಆಧರಿಸಿ ಬರುವ ಅರ್ಜಿಗಳನ್ನು ಆದ್ಯತೆಯ ಮೇರೆಗೆ ಕಾರ್ಡ್‌ ಒದಗಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು.

ಅರ್ಹ ಅರ್ಜಿದಾರರಿಗೆ ಕಾರ್ಡ್‌ ನೀಡಲು ಕ್ರಮ: ಉಡುಪಿ ಜಿಲ್ಲೆಯಲ್ಲಿ 2021 ಜನವರಿಯಿಂದ 2023 ಮಾರ್ಚ್‌ವರೆಗೆ 13,104 ಆದ್ಯತಾ ಪಡಿತರ ಚೀಟಿ ಕೋರಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 10,738 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಉಳಿದವುಗಳನ್ನು ಪರಿಶೀಲಿಸಿ ಅರ್ಹ ಅರ್ಜಿಗಳಿಗೆ ಕಾರ್ಡ್‌ ಒದಗಿಸುವುದಕ್ಕೆ ಕ್ರಮ ವಹಿಸಲಾಗುವುದು. ಜಿಲ್ಲೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗಾಗಿ 134 ಅರ್ಹ ಫಲಾನುಭವಿಗಳಿಗೆ ಆದ್ಯತಾ ಪಡಿತರ ಚೀಟಿಗಳನ್ನು ವಿತರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಇದನ್ನೂ ಓದಿ:ಪಡಿತರ ವಿತರಣೆಯಲ್ಲಿ ಲೋಪದೋಷ ಕಂಡುಬಂದರೆ ಶಿಸ್ತು ಕ್ರಮ: ಸಚಿವ ಮುನಿಯಪ್ಪ

ABOUT THE AUTHOR

...view details