ಬೆಂಗಳೂರು:ಚಿಕ್ಕಮಗಳೂರು ಜಿಲ್ಲೆಯಮೂಡಿಗೆರೆಯ ಬೈರಾಪುರ ಹೊಸಕೆರೆಯ ಆನೆ ಕಾರಿಡಾರ್ ವ್ಯಾಪ್ತಿಯ ಪ್ರದೇಶದಲ್ಲಿ ಫೋರ್ ವ್ಹೀಲರ್ ವಾಹನಗಳ ರ‍್ಯಾಲಿ ನಡೆಸಿರುವ ಸಂಬಂಧ ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.
ತಮ್ಮ ಟಿಪ್ಪಣಿಯಲ್ಲಿ ಸಚಿವರು, ಪಶ್ಚಿಮಘಟ್ಟ ಮತ್ತು ಅರಣ್ಯ ಮೋಜು, ಮಸ್ತಿಯ ತಾಣಗಳಲ್ಲ. ಈ ಪ್ರದೇಶದಲ್ಲಿ ನೂರಾರು ಪ್ರಭೇದದ ಖಗ, ಮೃಗ, ಕೀಟ, ಸಸ್ಯ ಸಂಕುಲಗಳಿವೆ. ಇವುಗಳೆಲ್ಲದರ ಸಂರಕ್ಷಣೆಯ ಹೊಣೆ ಅರಣ್ಯ ಇಲಾಖೆಯ ಮೇಲಿದೆ. ಆದರೆ, ಆಗಸ್ಟ್ 31ರಂದು ಮೂಡಿಗೆರೆ ತಾಲೂಕು ಬಾಳೂರು ಸಮೀಪದ ಬೈರಾಪುರ ಹೊಸಕೆರೆಯ 9 ಗುಡ್ಡಗಳ ವ್ಯಾಪ್ತಿಯಲ್ಲಿ, ಅದೂ ಆನೆ ಕಾರಿಡಾರ್ ಇರುವ ಕಾಡಿನೊಳಗೆ ಅಕ್ರಮವಾಗಿ ಪ್ರವೇಶಿಸಿ, ಫೋರ್ ವ್ಹೀಲ್ ಡ್ರೈವ್ ವಾಹನಗಳ ರ‍್ಯಾಲಿ ನಡೆಸಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದ್ದಾರೆ.