ಬೆಂಗಳೂರು: ಸಿನಿಮಾ ಮಾಡುವುದಾಗಿ ಲಕ್ಷಾಂತರ ರೂ. ಸಾಲ ಪಡೆದು, ಹಣ ಕೇಳಲು ಹೋದ ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಿ, 40 ಲಕ್ಷ ರೂ. ಪೀಕಿದ ಆರೋಪದ ಮೇಲೆ ಮೂವರ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆ ಉದ್ಯಮಿ ನೀಡಿದ ದೂರು ಆಧರಿಸಿ ಕಾವ್ಯ, ದಿಲೀಪ್ ಹಾಗೂ ರವಿಕುಮಾರ್ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ನಗರದಲ್ಲಿ ದೂರುದಾರ ಉದ್ಯಮಿಯು ಲೈಟಿಂಗ್ ಕಂಪನಿ ನಡೆಸುತ್ತಿದ್ದಾರೆ. ಕುಟುಂಬ ಆ್ಯಪ್ ಮುಖಾಂತರ ನಾಲ್ಕು ವರ್ಷದ ಹಿಂದೆ ಆರೋಪಿತೆ ಕಾವ್ಯ ಪರಿಚಯವಾಗಿದ್ದಳು. ಕಾಲ ಕ್ರಮೇಣ ಪರಿಚಯವು ಸ್ನೇಹಕ್ಕೆ ತಿರುಗಿತ್ತು. ಈ ಮಧ್ಯೆ ಸಿನಿಮಾ ಮಾಡುತ್ತಿರುವುದಾಗಿ ಹೇಳಿ ತನ್ನಿಂದ ನಿರ್ದೇಶಕರೊಬ್ಬರಿಗೆ 4.25 ಲಕ್ಷ ರೂಪಾಯಿ ಹಣ ಕೊಡಿಸಿದ್ದಾಳೆ ಎಂದು ಉದ್ಯಮಿಯ ದೂರಿನಲ್ಲಿ ತಿಳಿಸಲಾಗಿದೆ.
ಆದರೆ, ಕೆಲ ತಿಂಗಳ ಬಳಿಕ ಹಣ ಕೊಡಿಸುವಂತೆ 2023ರಲ್ಲಿ ದೂರುದಾರರು ಒತ್ತಾಯಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಹಣ ನೀಡುವುದಾಗಿ ವಾಟ್ಸ್ ಆ್ಯಪ್ ಕರೆ ಮಾಡಿ, ಆರೋಪಿತ ಮಹಿಳೆಯು ವಾಸವಾಗಿದ್ದ ಗೊಟ್ಟಿಗೆರೆಗೆ ಕರೆಯಿಸಿಕೊಂಡಿದ್ದಳು. ಬಳಿಕ ಲೈಂಗಿಕ ಕ್ರಿಯೆಗೆ ಪ್ರಚೋದಿಸಿ, ಬಲವಂತವಾಗಿ ಲೈಂಗಿಕ ಸಂಪರ್ಕ ಬೆಳೆಸಿಕೊಂಡು ಅದರ ವಿಡಿಯೋ ಸೆರೆಹಿಡಿದುಕೊಂಡಿದ್ದಳು. ಬಳಿಕ ಸಾಲದ ಹಣ ನೀಡುವುದಿಲ್ಲ. ಒಂದು ವೇಳೆ ಒತ್ತಾಯಿಸಿದರೆ, ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿದ್ದಾಳೆ ಎಂದು ದೂರಿನಲ್ಲಿ ಉದ್ಯಮಿ ವಿವರಿಸಿದ್ದಾರೆ.
ವಿಡಿಯೋ ಹರಿಬಿಡುವುದಾಗಿ ಬೆದರಿಸಿ ತನ್ನಿಂದ ಚಿನ್ನದ ಬ್ರಾಸ್ ಲೈಟ್, ಸರ ಪಡೆದುಕೊಂಡಿದ್ದಾಳೆ. ಇಷ್ಟಕ್ಕೆ ತೃಪ್ತಿಗೊಳದ ಆರೋಪಿತಳು, ಸ್ನೇಹಿತರಾದ ದಿಲೀಪ್ ಹಾಗೂ ರವಿಕುಮಾರ್ ಮೂಲಕ ಕಾರು ಕೊಡಿಸುವಂತೆ ದುಂಬಾಲು ಬಿದ್ದು ಹಂತ-ಹಂತವಾಗಿ ಒಟ್ಟು 40 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದಾರೆ. ಈ ಬಗ್ಗೆ ಪ್ರಶ್ನಿಸಿದರೆ ಖಾಸಗಿ ವಿಡಿಯೋ ಇಟ್ಟುಕೊಂಡು ಬೆದರಿಸುತ್ತಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡುವುದಾಗಿಯೂ ಮಹಿಳೆಯು ಬ್ಲ್ಯಾಕ್ಮೇಲ್ ಮಾಡಿದ್ದಾರೆ ಎಂದು ದೂರಿನಲ್ಲಿ ಉದ್ಯಮಿ ತಿಳಿಸಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಆರೋಪ: ಶಾಸಕ ಮುನಿರತ್ನ ಸೇರಿ 7 ಮಂದಿ ವಿರುದ್ಧ ಪ್ರಕರಣ, ಪೊಲೀಸರಿಂದ ಸ್ಥಳ ಮಹಜರು - Case Against Munirathna