ಕರ್ನಾಟಕ

karnataka

ETV Bharat / state

ಸೆಪ್ಟೆಂಬರ್ ಮೊದಲ ವಾರದೊಳಗೆ ವರ್ಗಾವಣೆ ಕೌನ್ಸೆಲಿಂಗ್​​ ಪೂರ್ಣಗೊಳಿಸುವಂತೆ ಗುಂಡೂರಾವ್ ಸೂಚನೆ - Employees Transfer Counselling

8 ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಎಲ್ಲ ವರ್ಗದ ನೌಕರರು, ಸಿಬ್ಬಂದಿ ವರ್ಗಾವಣೆ ಕೌನ್ಸೆಲಿಂಗ್​ ಮೂಲಕ ನಡೆಯುತ್ತಿದ್ದು, ಸೆಪ್ಟೆಂಬರ್ ಮೊದಲ ವಾರದೊಳಗೆ ವರ್ಗಾವಣೆ ಕೌನ್ಸೆಲಿಂಗ್​ ಪೂರ್ಣಗೊಳಿಸುವಂತೆ ಸಚಿವ ಗುಂಡೂರಾವ್ ಸೂಚನೆ ನೀಡಿದ್ದಾರೆ.

EMPLOYEES TRANSFER COUNSELLING
ಆರೋಗ್ಯಸೌಧದಲ್ಲಿ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್ (ETV Bharat)

By ETV Bharat Karnataka Team

Published : Aug 27, 2024, 7:57 AM IST

ಬೆಂಗಳೂರು : ಸೆಪ್ಟೆಂಬರ್ ಮೊದಲ ವಾರದೊಳಗೆ ಕೌನ್ಸೆಲಿಂಗ್​ ವರ್ಗಾವಣೆ ಪೂರ್ಣಗೊಳಿಸುವಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಬೆಂಗಳೂರಿನ ಆರೋಗ್ಯಸೌಧದಲ್ಲಿ ಸೋಮವಾರ ಇಲಾಖೆಯ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, 8 ವರ್ಷಗಳ ಬಳಿಕ ಆರೋಗ್ಯ ಇಲಾಖೆಯಲ್ಲಿ ಎಲ್ಲ ವರ್ಗದ ನೌಕರರು, ಸಿಬ್ಬಂದಿಯ ವರ್ಗಾವಣೆ ಕೌನ್ಸೆಲಿಂಗ್​​ ಮೂಲಕ ನಡೆಯುತ್ತಿದ್ದು, ಶೀಘ್ರಗತಿಯಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದರು.

ಸೆಪ್ಟೆಂಬರ್ ಮೊದಲ‌ ವಾರದಲ್ಲಿ ವೈದ್ಯಾಧಿಕಾರಿಗಳ ಜೇಷ್ಠತಾ ಪಟ್ಟಿ ತಯಾರಾಗಬೇಕು. ಹಲವು ವೈದ್ಯರು ಕೌನ್ಸೆಲಿಂಗ್​ ಎದುರು ನೋಡುತ್ತಿದ್ದಾರೆ. ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ವಿಳಂಬವಾಗಬಾರದು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಅಲ್ಲದೇ ಇಲಾಖೆಯಲ್ಲಿ ಕಾರ್ಯನಿರಗವಹಿಸುವ ಹೊರಗುತ್ತಿಗೆ ನೌಕರರಿಗೆ ಏಕರೂಪ ವೇತನ ಜಾರಿ ಕುರಿತು ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಔಷಧಗಳ ಪೂರೈಕೆಗೆ ಇನ್ನಷ್ಟು ವೇಗ : ಯಾವುದೇ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಕಂಡು ಬಂದರೆ ಸಹಿಸುವುದಿಲ್ಲ ಎಂದು ಇದೇ ವೇಳೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಔಷಧ ಸರಬರಾಜು ನಿಗಮದ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.

ಔಷಧಿ ನಿಗಮದಿಂದ ಸರಬರಾಜು ಆಗುತ್ತಿರುವ ಔಷಧಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಮೊದಲಿಗಿಂತ ಔಷಧ ಪೂರೈಕೆಯಲ್ಲಿ ಸುಧಾರಣೆ ಆಗಿದೆ. ಈ ಮೊದಲು ಕೇವಲ ಶೇ. 30 ರಷ್ಟು ಮಾತ್ರ ಔಷಧಗಳು ನಿಗಮದಿಂದ ಸರಬರಾಜು ಆಗುತ್ತಿತ್ತು. ಇದೀಗ ಶೇ. 65 ರಷ್ಟು ಔಷಧಗಳು ನಿಗಮದಿಂದ ಆಸ್ಪತ್ರೆಗಳಿಗೆ ರವಾನೆಯಾಗಿದೆ. ಆದರೆ, ಇದು ಶೇ, 90 ರಷ್ಟು ಆಗಬೇಕು.‌ ಶೇ. 10 ರಷ್ಟು ಔಷಧಗಳನ್ನ ಆಸ್ಪತ್ರೆಗಳು ಅವರ ಅಗತ್ಯಕ್ಕನುಗುಣವಗಿ ಸ್ಥಳೀಯ ಮಟ್ಟದಲ್ಲಿ ಎಬಿಎಆರ್​ಕೆ ಫಂಡ್​ನಲ್ಲಿ ಖರೀದಿಸಬಹುದು. ಆದರೆ, ಎಬಿಎಆರ್​ಕೆ ಹಣ ಬಹುತೇಕ ಔಷಧ ಖರೀದಿಗೆ ಬಳಕೆ ಆಗಬಾರದು. ಇದರಿಂದ ಆಸ್ಪತ್ರೆಯ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತದೆ. ನಿಗಮದಿಂದ ಶೇ. 90 ರಷ್ಟು ಔಷಧಗಳು ಪೂರೈಕೆ ಆದರೆ, ಎಬಿಎಆರ್​ಕೆ ಅನುದಾನವನ್ನ ಆಸ್ಪತ್ರೆಗಳ ಇತರ ಅಭಿವೃದ್ಧಿ ಕೆಲಸಗಳಿಗೆ ಬಳಸಬಹುದು. ಹೀಗಾಗಿ ಔಷದಗಳ ಪೂರೈಕೆಗೆ ಇನ್ನು ಹೆಚ್ವಿನ ವೇಗ ನೀಡಬೇಕು ಎಂದು ಸಚಿವರು ಸಭೆಯಲ್ಲಿ ನಿಗಮದ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನು ಆರೋಗ್ಯ ಸೇವೆಗಳ ಕುರಿತು ಸಾರ್ವಜನಿಕರ ದೂರು ದುಮ್ಮಾನಗಳಿಗೆ 104 ಸಹಾಯವಾಣಿಗೆ ಪರ್ಯಾಯವಾಗಿ 112 ಸಹಾಯವಾಣಿ ಆರಂಭಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿ ವರದಿ ನೀಡಲು ಸಚಿವರು ಇದೇ ವೇಳೆ ಸೂಚನೆ ನೀಡಿದರು. 104 ಸಹಾಯವಾಣಿ ಆರೋಗ್ಯ ಇಲಾಖೆಗೆ ಮಹತ್ವದ್ದಾಗಿದೆ. ಇದನ್ನ ಜಾರಿಗೊಳಿಸಲು ಅಡೆತಡೆಗಳಿದ್ದರೆ 112 ಮೂಲಕ ಸೇವೆ ಒದಗಿಸಲು ಯೋಜನೆ ರೂಪಿಸುವಂತೆ ನಿರ್ದೇಶಿಸಿದರು.

ಇದನ್ನೂ ಓದಿ:ವೈದ್ಯಕೀಯ ಸೇವೆಯಲ್ಲಿ ಬದ್ಧತೆ ಹಾಗೂ ನೈತಿಕತೆ ಇಂದಿನ ಅಗತ್ಯವಾಗಿದೆ: ಸುಧಾ ಮೂರ್ತಿ - Sudha Murty

ABOUT THE AUTHOR

...view details