ಬೆಂಗಳೂರು:ಹೈಕಮಾಂಡ್ಗೆ ವರದಿ ಕೊಡಲಿ. ವರದಿ ಕೊಡೋದನ್ನು ಯಾರು ಬೇಡ ಅಂತಾರೆ. ಹೈಕಮಾಂಡ್ಗೆ ವರದಿ ಕೊಡಲು ಇವರಿದ್ದಾರೆ, ಪಡೆಯಲು ಅವರಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ್ ಭಂಡಾರಿ ಮಾಧ್ಯಮ ಪ್ರಕಟಣೆ ವಿಚಾರವಾಗಿ ಗೃಹ ಸಚಿವ ಜಿ.ಪರಮೇಶ್ವರ್ ಸೂಚ್ಯವಾಗಿ ಉತ್ತರಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮಗಳಿಗೆ ಪರಮೇಶ್ವರ್ ಅವರು ಪ್ರತಿಕ್ರಿಯೆ ನೀಡಿದರು.ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಬದಲಾವಣೆ ಯಾವಾಗ ಅಂತ ಗೊತ್ತಿಲ್ಲ. ಲೋಕಸಭೆ ನಂತರ ಬದಲಾವಣೆ ಆಗುತ್ತೆ ಅಂತ ಸತೀಶ್ ಜಾರಕಿಹೊಳಿ ಹೇಳಿದ್ದು ನಾನು ನೋಡಿದೆ. ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ಡಿಕೆಶಿ ಈಗ ಅಧ್ಯಕ್ಷರಿದ್ದಾರೆ, ಎರಡು ದೊಡ್ಡ ಖಾತೆ ಇದೆ. ಸಹಜವಾಗಿ ಅಧ್ಯಕ್ಷ ಸ್ಥಾನ ಬದಲಾಯಿಸಿ ಅಂತ ಬೇರೆಯವರು ಕೇಳ್ತಾರೆ. ನಾನು ಅಧ್ಯಕ್ಷ ಇದ್ದಾಗಲೂ ಬದಲಾಯಿಸಿ ಅಂತ ಹೇಳಿದ್ರು. ಆಗ ನಾನು ಪಕ್ಷಕ್ಕೆ ಪ್ರಾಮುಖ್ಯತೆ ಕೊಟ್ಟು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ. ಮಂತ್ರಿ ಅಥವಾ ಅಧ್ಯಕ್ಷಗಿರಿ ಪೈಕಿ ಒಂದು ಆಯ್ಕೆ ಮಾಡಿಕೊಳ್ಳಿ ಅಂತ ಆಗ ನನಗೆ ಹೇಳಿದ್ರು, ನಾನು ಅಧ್ಯಕ್ಷ ಸ್ಥಾನ ಆರಿಸಿದ್ದೆ. ಈಗಲೂ ಅದನ್ನೇ ಬಯಸ್ತಿದ್ದಾರೆ. ಅವರಿಗೂ ಒತ್ತಡ ಇರುತ್ತೆ. ಡಿಕೆಶಿಗೆ ಎರಡು ದೊಡ್ಡ ಖಾತೆ ಇದೆ, ಪಕ್ಷ ಸಂಘಟಿಸುವ ದೊಡ್ಡ ಜವಾಬ್ದಾರಿ ಸಹ ಇದೆ. ಹೈಕಮಾಂಡ್ನವರು ಏನು ತೀರ್ಮಾನ ಮಾಡ್ತಾರೋ ನೋಡಬೇಕು ಎಂದು ಹೇಳಿದರು.
ಹೈಕಮಾಂಡ್ ಗಮನಿಸುತ್ತದೆ : ಡಿಕೆಶಿ ಪಕ್ಷ ಸಂಘಟನೆ ಸರಿಯಾಗಿ ಮಾಡ್ತಿಲ್ಲ ಎಂಬ ಆರೋಪ ವಿಚಾರವಾಗಿ ಮಾತನಾಡಿ, ಹೈಕಮಾಂಡ್ನವರು ಅದನ್ನೆಲ್ಲ ಗಮನಿಸ್ತಿದ್ದಾರಲ್ಲ. ನಾವು ಒಂದು ಸಮುದಾಯ ಸೇರಿ ಸಭೆ ಮಾಡ್ತೀವಿ ಅಂದಿದ್ದನ್ನು ಹೈಕಮಾಂಡ್ ಗಮನಿಸಿದೆ. ಹಾಗೆಯೇ ಪಕ್ಷ ಸಂಘಟನೆ ಆಗ್ತಿದೆಯಾ ಇಲ್ವಾ ಅಂತನೂ ಹೈಕಮಾಂಡ್ನವರು ಗಮನಿಸಿರ್ತಾರೆ. ಆ ಸಂದರ್ಭದಲ್ಲಿ ಅವರು ತೀರ್ಮಾನ ತಗೋತಾರೆ ಎಂದರು.