ಬೆಂಗಳೂರು:ವಿಜಯಪುರ ಜಿಲ್ಲೆಯ ಮಮದಾಪುರ ಗ್ರಾಮದ 1,494 ಎಕರೆ 38 ಗುಂಟೆ ಅರಣ್ಯ ಪ್ರದೇಶಕ್ಕೆ 'ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ' ಎಂದು ನಾಮಕರಣ ಮಾಡಲು ನಿರ್ಧರಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಆಧ್ಯಾತ್ಮಿಕ ಬೋಧನೆಗಳಿಂದ ಜನಮನ ಗೆದ್ದಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪರಿಸರ ಸಂರಕ್ಷಣೆ ಮತ್ತು ಸಮುದಾಯ ಯೋಗಕ್ಷೇಮಕ್ಕೂ ದೊಡ್ಡ ಕೊಡುಗೆ ನೀಡಿದ್ದಾರೆ. ಶ್ರೀಗಳ ಸ್ಮರಣಾರ್ಥ ಅವರ 2ನೇ ಪುಣ್ಯಸ್ಮರಣೆಯ ದಿನವಾದ ಜನವರಿ 2ರಂದು ವಿಜಯಪುರದಲ್ಲಿ ವಿಧ್ಯುಕ್ತವಾಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವಿಧ್ಯ ಪಾರಂಪರಿಕ ತಾಣ ಫಲಕವನ್ನು ಅನಾವರಣ ಮಾಡಲಾಗುವುದು ಎಂದರು.
ವಿವಿಧ ಕಾಲಾವಧಿಯಲ್ಲಿ ಮಮದಾಪುರ ಭಾಗದಲ್ಲಿನ ಅರಣ್ಯ ಪ್ರದೇಶಗಳ ಅಧಿಸೂಚನೆಯಾಗಿದ್ದು, ಪ್ರಸ್ತುತ ಸುಮಾರು 1,494 ಎಕರೆ 38 ಗುಂಟೆ ವಿಸ್ತೀರ್ಣದ ಅರಣ್ಯವಿದೆ. ಪ್ರಾಣಿಸಂಕುಲ, ಪಕ್ಷಿ ಸಂಕುಲ, ಕೀಟ ಸಂಕುಲ ಮತ್ತು ಸಸ್ಯಸಂಕುಲದಿಂದ ಕೂಡಿರುವ ಶ್ರೀಮಂತ ಜೀವವೈವಿಧ್ಯತೆಯ ಈ ತಾಣಕ್ಕೆ ಶ್ರೀ ಸಿದ್ದೇಶ್ವರ ಸ್ವಾಮೀಜಿ ಜೀವವೈವೀಧ್ಯ ಪಾರಂಪರಿಕ ತಾಣ ಎಂದು ಜೀವವೈವಿಧ್ಯ ಕಾಯಿದೆ 2022ರ ಸೆಕ್ಷನ್ 37ರನ್ವಯ ಮರು ನಾಮಕರಣ ಮಾಡಲಾಗುತ್ತಿದೆ ಎಂದು ಹೇಳಿದರು.