ಕರ್ನಾಟಕ

karnataka

ETV Bharat / state

ರಾಜ್ಯಾದ್ಯಂತ ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಚಾಲನೆ ನೀಡಲು 'ಅಕ್ಕ ಕೆಫೆ' ಸಜ್ಜಾಗಿದೆ: ಸಚಿವ ಡಾ.ಪಾಟೀಲ್ - AKKA CAFE

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಅವರು 'ಅಕ್ಕ ಕೆಫೆ' ಕುರಿತು ಮಾತನಾಡಿದ್ದಾರೆ. ಈ ಯೋಜನೆ ರಾಜ್ಯದ ಸಾಮಾಜಿಕ ಆರ್ಥಿಕ ಅಭಿವೃದ್ಧಿ, ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದ್ದಾರೆ.

Minister Dr. Sharan Prakash Patil
ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ (ETV Bharat)

By ETV Bharat Karnataka Team

Published : Oct 8, 2024, 8:30 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ): ರಾಜ್ಯ ಸರ್ಕಾರದ ವತಿಯಿಂದ ಜಾರಿಗೆ ತಂದಿರುವ 'ಅಕ್ಕ ಕೆಫೆ' ಯೋಜನೆ ಕರ್ನಾಟಕದ ಸಾಮಾಜಿಕ-ಆರ್ಥಿಕ ಅಭಿವೃದ್ಧಿ, ಮಹಿಳಾ ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ್ ಹೇಳಿದರು.

ಮಂಗಳವಾರ ದೇವನಹಳ್ಳಿಯಲ್ಲಿ 'ಅಕ್ಕ ಕೆಫೆ' ಉದ್ಘಾಟಿಸಿ ಭಾಷಣ ಮಾಡಿದ ಸಚಿವರು, ನಗರ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳೆಯರಿಗೆ ಸ್ವಾವಲಂಬನೆ ಮತ್ತು ಉದ್ಯಮಶೀಲತೆ ಉತ್ತೇಜಿಸುವ ಯೋಜನೆ ಇದಾಗಿದೆ. ಇದು ಪರಿವರ್ತನೆಯ ಸಾಮರ್ಥ್ಯ ಹೊಂದಿದೆ. 'ಅಕ್ಕ ಕೆಫೆ' ಮಹಿಳೆಯರನ್ನು ಸಬಲೀಕರಣಗೊಳಿಸುವ ಮೂಲಕ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಉದ್ಯಮಶೀಲತೆಗೆ ಆದ್ಯತೆ ನೀಡಲಿದೆ. ಕರ್ನಾಟಕದ ಸಾಮಾಜಿಕ-ಆರ್ಥಿಕ ಕ್ಷೇತ್ರದ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ ಎಂದರು.

2024-25ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪರಿಚಯಿಸಿದ ಅಕ್ಕ ಕೆಫೆ ಮಹಿಳೆಯರಿಗೆ ಸುಸ್ಥಿರ ಜೀವನೋಪಾಯವನ್ನು ಸೃಷ್ಟಿಸುವ ಗುರಿ ಹೊಂದಿದೆ. ಇದು ನಿರ್ದಿಷ್ಟವಾಗಿ ಮಹಿಳಾ ಉದ್ಯಮಿಗಳನ್ನು ಬೆಂಬಲಿಸುತ್ತದೆ. ವಿಶೇಷವಾಗಿ ಸ್ವ-ಸಹಾಯ ಗುಂಪುಗಳಿಂದ (SHGs), ಅವರಿಗೆ ಅತ್ಯಾಧುನಿಕ ಕೆಫೆಗಳನ್ನು ನಿರ್ವಹಿಸಲು ಅವಕಾಶಗಳನ್ನು ನೀಡಲಿದೆ. ಈ ಕೆಫೆಗಳು ಗುಣಮಟ್ಟದ ಮತ್ತು ನೈರ್ಮಲ್ಯದ ಉನ್ನತ ಗುಣಮಟ್ಟವನ್ನು ಅನುಸರಿಸುವಾಗ ಸ್ಥಳೀಯ ಪಾಕಪದ್ಧತಿಗೂ ಅವಕಾಶವಿರುತ್ತದೆ ಎಂದು ತಿಳಿಸಿದರು.

25 ಕೋಟಿ ರೂ. ಅನುದಾನ ಮೀಸಲು: ಮೊದಲ ಹಂತದಲ್ಲಿ, ಗ್ರಾಮೀಣ, ನಗರ ಸ್ಥಳಗಳನ್ನು ಆಯ್ಕೆ ಮಾಡಿ ರಾಜ್ಯಾದ್ಯಂತ 50 ಕೆಫೆಗಳನ್ನು ಸ್ಥಾಪಿಸಲು ಸರ್ಕಾರ ಯೋಜಿಸಿದೆ. ಸ್ವ ಸಹಾಯ ಮಹಿಳಾ ಗುಂಪುಗಳು ಈ ಕೆಫೆಗಳನ್ನು ನಿರ್ವಹಿಸುತ್ತವೆ. ಮೂಲಸೌಕರ್ಯ ಬೆಂಬಲ ಸೇರಿದಂತೆ ಸೆಟಪ್ ವೆಚ್ಚಗಳಿಗಾಗಿ 15 ಲಕ್ಷ ರೂ.ವರೆಗೆ ಅನುದಾನವನ್ನು ಒದಗಿಸಲಾಗುವುದು. ಇದಲ್ಲದೇ ರಾಜ್ಯಾದ್ಯಂತ 2500 ಕಾಫಿ ಕಿಯೋಸ್ಕ್​ಗಳನ್ನು ತೆರೆಯಲಾಗುವುದು. ಕೇಂದ್ರ ಕಾಫಿ ಮಂಡಳಿಯ ನೆರವಿನಿಂದ ಗ್ರಾಮೀಣ ಮಹಿಳೆಯರಿಗೆ ತರಭೇತಿ ನೀಡಲಾಗುವುದು. ಇದಕ್ಕಾಗಿ 25 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ ಎಂದು ಪಾಟೀಲ್ ಮಾಹಿತಿ ನೀಡಿದರು.

ರಾಷ್ಟ್ರೀಯ ಜೀವನೋಪಾಯ ಮಿಷನ್-ಕರ್ನಾಟಕ (NLM) ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಅಡಿಯಲ್ಲಿ ಸ್ಟಾರ್ಟಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ (SVEP) ಮೂಲಕ ಅಕ್ಕ ಕೆಫೆ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಸಮಾರಂಭದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಹೆಚ್.ಮುನಿಯಪ್ಪ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್, ಎನ್‌ಆರ್‌ಎಲ್‌ಎಂ ಮಿಷನ್ ನಿರ್ದೇಶಕಿ ಶ್ರೀವಿದ್ಯಾ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಎನ್. ಶಿವಶಂಕರ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕೆ.ಎನ್.ಅನುರಾಧ ಉಪಸ್ಥಿತರಿದ್ದರು.

ಕ್ಲೌಡ್ ಕಿಚನ್ ಸೌಕರ್ಯ: ಅಕ್ಕ ಕೆಫೆಯ ರುಚಿಕರವಾದ ಕೊಡುಗೆಗಳನ್ನು ಆನಂದಿಸಲು ನೀವು ಇನ್ನು ಮುಂದೆ ದೇವನಹಳ್ಳಿ ಅಥವಾ ದೂರದ ಸ್ಥಳಗಳಿಗೆ ಪ್ರಯಾಣಿಸಬೇಕಾಗಿಲ್ಲ. ಅಕ್ಕ ಕೆಫೆ ಉತ್ಪನ್ನಗಳು ಈಗ ಕ್ಲೌಡ್ ಕಿಚನ್ ಸೇವೆಯ ಮೂಲಕ ಪಡೆದುಕೊಳ್ಳಬಹುದು. ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿ, ನಿಮ್ಮ ನೆಚ್ಚಿನ ಬೇಕರಿ ವಸ್ತುಗಳನ್ನು ನಿಮ್ಮ ಮನೆ ಬಾಗಿಲಲ್ಲಿ ಪಡೆಯಬಹುದು. ಜೀವನೋಪಾಯ ಇಲಾಖೆ ಈಗ ಈ ಯೋಜನೆಯನ್ನೂ ಜಾರಿಗೆ ತಂದಿದೆ.

ಕೆಫೆಗಳು ಪರಿಣಾಮಕಾರಿಯಾಗಿ ನಿರ್ವಹಿಸಲು ಅಗತ್ಯವಾದ ಕೌಶಲ್ಯಗಳೊಂದಿಗೆ IHM-ಬೆಂಗಳೂರು ಜೊತೆ NLM ಪಾಲುದಾರಿಕೆ ಹೊಂದಿದೆ. ಹೆಚ್ಚುವರಿಯಾಗಿ, ಎನ್ಎಲ್ಎಂ ಬೇಕರಿ ಘಟಕವನ್ನು ಪ್ರಾಯೋಗಿಕವಾಗಿ ನಡೆಸಲಾಗುತ್ತಿದೆ. ಇದನ್ನು ಸ್ವ ಸಹಾಯ ಮಹಿಳಾ ಉದ್ಯಮಿಗಳು ನಡೆಸುತ್ತಿದ್ದಾರೆ, ಎನ್ಜಿಒ ಮೂಲಕ ತರಬೇತಿಯನ್ನು ನೀಡಲಾಗುತ್ತದೆ.

ಈ ಬೇಕರಿ ಘಟಕವು ಕ್ಲೌಡ್ ಕಿಚನ್ ಆಗಿ ಕಾರ್ಯನಿರ್ವಹಿಸುತ್ತದೆ. ಕುಕೀಸ್, ಮಫಿನ್​ಗಳು ಮತ್ತು ಕೇಕ್​ಗಳನ್ನು ಬೆಂಗಳೂರಿನ ಅಕ್ಕ ಕೆಫೆಗಳಿಗೆ ಪೂರೈಸಲಾಗುವುದು ಮತ್ತು ದೇವನಹಳ್ಳಿಯಲ್ಲಿ ಪ್ರೀಮಿಯಂ ಬೇಕರಿ ಔಟ್ಲೆಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ನವೀನ ತಂತ್ರಜ್ಞಾನ ಮತ್ತು ಉತ್ತಮ ವ್ಯಾಪಾರದಿಂದ ಬೆಂಬಲಿತವಾಗಿರುವ ಬೇಕರಿ ಘಟಕವು ಮಹಿಳಾ ಉದ್ಯಮಿಗಳಿಗೆ ಹೆಚ್ಚುವರಿ ಆದಾಯವನ್ನು ಒದಗಿಸುತ್ತದೆ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಒದಗಿಸುತ್ತದೆ.

ಇದನ್ನೂ ಓದಿ:ಶೀಘ್ರದಲ್ಲೇ ವೈದ್ಯಕೀಯ ಕಾಲೇಜುಗಳಿಗೆ 650 ಸಹಾಯಕ ಪ್ರಾಧ್ಯಾಪಕರು, 1,200 ದಾದಿಯರ ನೇಮಕ: ಶರಣಪ್ರಕಾಶ್‌ ಪಾಟೀಲ್​ - Sharan Prakash Patil

ABOUT THE AUTHOR

...view details