ಹುಬ್ಬಳ್ಳಿ:ಹಾಸನ ಪೆನ್ ಡ್ರೈವ್ ವಿಡಿಯೋ ಪ್ರಕರಣ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಶಾಸಕ ಹೆಚ್.ಡಿ. ರೇವಣ್ಣ ಅವರನ್ನು ಕೂಡಲೇ ಬಂಧಿಸಿ ಶಿಕ್ಷೆಗೊಳಪಡಿಸುವಂತೆ ಆಗ್ರಹಿಸಿ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಬೃಹತ್ ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ -ಧಾರವಾಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವತಿಯಿಂದ ಚೆನ್ನಮ್ಮ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ರ‍್ಯಾಲಿ ನಡೆಯಿತು. ಈ ವೇಳೆ ಕಾರ್ಯಕರ್ತೆಯರು ಪ್ರಜ್ವಲ್ ರೇವಣ್ಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ಹಾಸನ ಪೆನ್ ಡ್ರೈವ್ ವಿಡಿಯೋ ಪ್ರಕರಣ ನಾಲ್ಕು ದಿನ, ನಾಲ್ಕು ವರ್ಷ ಅಥವಾ 40 ವರ್ಷ ಹಿಂದಿನದ್ದೆ ಆಗಿರಲಿ, ಈ ರೀತಿ ಘಟನೆಯಾಗಿದೆ ಎಂದು ರೇವಣ್ಣ ಅವರೇ ಪರೋಕ್ಷವಾಗಿ ಒಪ್ಪಿಕೊಂಡಂತೆ. ಇದು ತನಿಖೆಯ ಮೂಲಕ ಕಾನೂನು ಕ್ರಮ ಆಗಬೇಕು. ಇವರು ಯಾಕೆ ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಹೋಗಲು ಬಿಟ್ಟರು, ಕುಮಾರಸ್ವಾಮಿ ಮತ್ತು ರೇವಣ್ಣ ಕೊಡಲೇ ಪ್ರಜ್ವಲ್ರನ್ನು ದೇಶಕ್ಕೆ ವಾಪಸ್ ಕರೆಸಿ ಪೊಲೀಸರ ವಶಕ್ಕೆ ಒಪ್ಪಿಸಬೇಕು. ಅವರ ತನಿಖೆಗೆ ಒಳಾಗಬೇಕು. ದೇಶದ ಎಲ್ಲಾ ಏರ್ಪೋರ್ಟ್ಗಳು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಂಟ್ರೋಲ್ನಲ್ಲಿವೆ. ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋಗಿದ್ದರೆ ಅವರನ್ನು ದೇಶಕ್ಕೆ ಕರೆತರುವ ಕೆಲಸವನ್ನು ಅಮಿತ್ ಶಾ ಮಾಡಬೇಗುತ್ತೆ ಎಂದು ವಾಗ್ದಾಳಿ ನಡೆಸಿದರು.
''ಈ ಹಿಂದೆಯೇ ಪ್ರಜ್ವಲ್ ರೇವಣ್ಣ ಅವರ ಪ್ರಕರಣದ ಬಗ್ಗೆ ಗೊತ್ತಿದ್ದರು ಅವರಿಗೇ ಟಿಕೆಟ್ ಕೊಟ್ಟಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ, ಪ್ರಜ್ವಲ್ ರೇವಣ್ಣ ಪ್ರಕರಣ ಮೊದಲೇ ಗೊತ್ತಿದ್ದರೂ ಟಿಕೆಟ್ ಕೊಟ್ಟಿದ್ದಾರೆ ಎಂದರೆ ಯಾವ ರೀತಿಯಾಗಿ ಇವರು ಮಹಿಳೆಯವರ ಪರ ಇದ್ದಾರೆ ಹೇಳಿ?. ಅಮಿತ್ ಶಾ ಅವರು ಪತ್ರಿಕಾ ಹೇಳಿಕೆ ಕೊಟ್ಟಿದ್ದಾರೆ. ಅವರಿಗೆ ನೈತಿಕತೆ ಇದೆಯಾ ಎಂದು ನಾನು ಅವರನ್ನು ಕೇಳುತ್ತೇನೆ. ಪತ್ರ ನಿಮ್ಮವರೇ ಬರೆದಿದ್ದಾರೆ. ನಿಮಗೆ, ವಿಜಯೇಂದ್ರ ಸೇರಿದಂತೆ ಇಡೀ ಬಿಜೆಪಿ ಮುಖಂಡರಿಗೆ ವಿಷಯ ಗೊತ್ತಿದೆ, ಅವರ ಬಳಿ ವಿಡಿಯೋಗಳು ಮೊದಲೇ ಇದ್ದವು. ನೀವು ಯಾಕೆ ಅವರಿಗೆ ಟಿಕೆಟ್ ಕೊಟ್ರಿ, ಯಾಕೆಂದರೆ ನಿಮಗೆ ಚುನಾವಣೆಯಲ್ಲಿ ಗೆಲ್ಲುವುದು ಮುಖ್ಯವಾಗಿತ್ತು. ಈ ಪ್ರಕರಣವನ್ನು ಏಗಾದರೂ ಮಾಡಿ ಮುಚ್ಚಿ ಹಾಕಬಹುದು ಎಂದು ನೀವು ಅಂದುಕೊಂಡಿದ್ದೀರಿ. ಚುನಾವಣೆಯಲ್ಲಿ ಗೆಲ್ಲಲು ಎಲ್ಲವನ್ನು ಬಿಟ್ಟುಕೊಡುವುದಕ್ಕೆ ರೆಡಿ, ಹೆಣ್ಣು ಮಕ್ಕಳು, ದಲಿತರು, ಹಿಂದುಳಿದ ವರ್ಗದವರನ್ನು ಬಲಿ ತೆಗೆದುಕೊಳ್ಳೋಕೆ ನೀವು ರೆಡಿ'' ಎಂದು ಹರಿಹಾಯ್ದರು.