ಬೆಂಗಳೂರು:ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಉತ್ತರಕನ್ನಡ ಜಿಲ್ಲೆಗಳ ತಾಲೂಕುಗಳಲ್ಲಿ ಮಂಗನ ಕಾಯಿಲೆ ನಿಯಂತ್ರಣ ಕುರಿತಂತೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಸೋಮವಾರ ಮಲೆನಾಡು ಭಾಗದ ಶಾಸಕರು ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕೈಗೊಂಡ ಕ್ರಮಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಿದ ಸಚಿವರು, ಕಾಯಿಲೆ ನಿಯಂತ್ರಣಕ್ಕೆ ಹೆಚ್ಚಿನ ಕ್ರಮಗಳ ಕುರಿತು ಶಾಸಕರ ಅಭಿಪ್ರಾಯ ಪಡೆದುಕೊಂಡರು. ರೋಗ ಲಕ್ಷಣಗಳು ಕಂಡುಬಂದ ತಕ್ಷಣ ಟೆಸ್ಟಿಂಗ್ ಶೀಘ್ರಗತಿಯಲ್ಲಿ ನಡೆಸುವಂತೆ ಸಚಿವರು ಆರೋಗ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಕೆಎಫ್‌ಡಿ ಪಾಸಿಟಿವ್ ಬಂದವರಿಗೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದರು. ಶಿರಸಿಯಲ್ಲಿ ಕೆಎಫ್‌ಡಿ ಟೆಸ್ಟಿಂಗ್ಗೆ ಪ್ರಯೋಗಾಲಯ ಸ್ಥಾಪನೆ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸದ್ಯ 103 ಮಂಗನ ಕಾಯಿಲೆ ಪ್ರಕರಣಗಳು ಸಕ್ರಿಯವಾಗಿದ್ದು, ಪಾಸಿಟಿವ್ ಪ್ರಕರಣಗಳಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತಿದೆ. ಈಗಾಗಲೇ ಮಂಗನ ಕಾಯಿಲೆಯಿಂದ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ತಲಾ 1 ಸಾವು ಸಂಭವಿಸಿದೆ. ಮರಣ ಪ್ರಮಾಣ ತಗ್ಗಿಸಲು ಆಯಾ ಜಿಲ್ಲೆಗಳ ಡಿಹೆಚ್‌ಒಗಳಿಗೆ ಹೆಚ್ಚಿನ ಹೊಣೆ ನೀಡಲಾಗಿದೆ. ರಾಜ್ಯದಲ್ಲಿ ಕೆಎಫ್‌ಡಿ ಪರೀಕ್ಷೆ, ಪಾಸಿಟಿವ್, ಮರಣ, ಡಿಸ್ಚಾರ್ಜ್ ಕುರಿತಾಗಿ ದೈನಂದಿನ ಬುಲೆಟಿನ್ ಹೊರಡಿಸಲಾಗುತ್ತಿದೆ. ವಿಡಿಎಲ್ ಶಿವಮೊಗ್ಗ ಮತ್ತು ಎಂಐವಿ ಮಣಿಪಾಲದಲ್ಲಿನ ಪ್ರಯೋಗಾಲಯಗಳನ್ನು ಕೆಎಫ್‌ಡಿ ಪರೀಕ್ಷೆಗೆ ಗುರುತಿಸಲಾಗಿದೆ. ಶೀಘ್ರ ಮಾದರಿಗಳನ್ನು ಸಂಸ್ಕರಿಸಿ ಪರೀಕ್ಷೆ ನಡೆಸಿ ವರದಿ ನೀಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.