ಶಿವಮೊಗ್ಗ: ಎರಡು ವರ್ಷದ ಬಳಿಕ ಸಂಪುಟ ಪುನಾರಚನೆ ಮಾಡಿದರೆ ಒಳ್ಳೆಯದೇ ತಾನೇ. ಬೇರೆಯವರು ಇರುತ್ತಾರೆ, ಅವರಿಗೂ ಅವಕಾಶ ಸಿಗಬೇಕು. ಆ ನಿಟ್ಟಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ನಾವೇ ಇರಬೇಕು, ಬೇರೆಯವರು ಮಂತ್ರಿಗಳಾಗಬಾರದು ಎಂದೇನಿಲ್ಲ. ಅದಕ್ಕೋಸ್ಕರ ಎಲ್ಲರೂ ತಯಾರಾಗಿರಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.
ಮಂಗನ ಕಾಯಿಲೆ ಪೀಡಿತ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳುವ ಸಂಬಂಧ ಸಭೆ ನಡೆಸಲಾಯಿತು. ನಾಲ್ಕು ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಲಾಯಿತು. ಇಂದು ಭದ್ರಾವತಿಯ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಭದ್ರಾವತಿಯಲ್ಲಿ ಹೊಸ ಆಸ್ಪತ್ರೆ ನಿರ್ಮಿಸಬೇಕು ಎಂದು ಮನವಿ ಬಂದಿದೆ. ಈ ಕುರಿತು ಪರಿಶೀಲನೆ ನಡೆಸಲಾಗುವುದು. ರಿಪ್ಪನ್ಪೇಟೆ ಹಾಗೂ ಚಂದ್ರಗುತ್ತಿ ಪಿಹೆಚ್ಸಿಗಳನ್ನು ಮೇಲ್ದರ್ಜೆಗೇರಿಸಬೇಕೆಂಬ ಮನವಿ ಬಂದಿದ್ದು, ಇವೆರಡನ್ನು ಮೇಲ್ದರ್ಜೆಗೇರಿಸಲಾಗುವುದು. ಸಾಗರ ಆಸ್ಪತ್ರೆ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದೆ. ಇದನ್ನೂ ಮೇಲ್ದರ್ಜೆಗೇರಿಸಲಾಗುತ್ತದೆ ಎಂದು ತಿಳಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ತೀವ್ರ ನಿಗಾ ಘಟಕ: ತಾಯಿ ಮತ್ತು ಮಕ್ಕಳ ಆಸ್ಪತ್ರೆಗಳಿಗೆ ತೀವ್ರ ನಿಗಾ ಘಟಕ ಮಾಡಬೇಕಾಗಿದೆ. ಇದರಿಂದ ಮಕ್ಕಳ ಸಾವು ಕಡಿಮೆ ಆಗುತ್ತದೆ. ಇದನ್ನು ರಾಜ್ಯದ ಎಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ವಿಸ್ತರಣೆ ಮಾಡಲಾಗುತ್ತದೆ. ಮುಂದಿನ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕಿಮೋಥೆರಪಿ ಪ್ರಾರಂಭ ಮಾಡಲಾಗುತ್ತದೆ. ಇದಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ ಎಂದರು.