ಕರ್ನಾಟಕ

karnataka

ETV Bharat / state

ಸರ್ಕಾರ ಯಾವುದೇ ಟ್ಯಾಕ್ಸ್ ಹಾಕದೇ ಅಭಿವೃದ್ಧಿ ಮಾಡಲು ಸಾದ್ಯವಿಲ್ಲ: ಸಚಿವ ಚೆಲುವರಾಯಸ್ವಾಮಿ - cheluvarayaswamy - CHELUVARAYASWAMY

ಮಹಾರಾಷ್ಟ್ರ, ತೆಲಂಗಾಣ ಸೇರಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಮ್ಮಿ ಇದೆ. ಸರ್ಕಾರ ಅವೈಜ್ಞಾನಿಕವಾಗಿ ಬೆಲೆ ಏರಿಕೆ ಮಾಡಿದಾಗ ತಪ್ಪು ಅನ್ನಬಹುದು, ಆಗ ಪ್ರಶ್ನೆ ಮಾಡಬಹುದು ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ಚೆಲುವರಾಯಸ್ವಾಮಿ
ಚೆಲುವರಾಯಸ್ವಾಮಿ (ETV Bharat)

By ETV Bharat Karnataka Team

Published : Jun 26, 2024, 3:40 PM IST

Updated : Jun 26, 2024, 5:02 PM IST

ಸಚಿವ ಚೆಲುವರಾಯಸ್ವಾಮಿ (ETV Bharat)

ಬೆಳಗಾವಿ: "ಯಾವುದೇ ಸರ್ಕಾರ ವರ್ಷದಿಂದ ವರ್ಷಕ್ಕೆ ಮುಂದೆ ಹೋದಾಗ ಎಲ್ಲ ಬೆಲೆಗಳು ಏರಿಕೆ ಆಗುತ್ತವೆ. ಕಳೆದ ವರ್ಷ ಮಾಡಿದ ಯಾವುದೇ ಅಭಿವೃದ್ಧಿ ಕೆಲಸ ಶೇ.10 ರಷ್ಟು ಸಾಮಾನ್ಯವಾಗಿ ಏರಿಕೆಯಾಗುತ್ತದೆ" ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ಹೇಳಿದರು.

ಜಿಲ್ಲಾ ಕಾಂಗ್ರೆಸ್ ಭವನದಲ್ಲಿಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ರೈತರಿಗೆ ಕೊಡುವ ಸಬ್ಸಿಡಿ, ಅನುದಾನ ಕೂಡ ಏರಿಕೆ ಆಗುತ್ತದೆ. ಸರ್ಕಾರ ಯಾವುದೇ ಟ್ಯಾಕ್ಸ್ ಹಾಕದೇ ಅಭಿವೃದ್ಧಿ ಮಾಡಲು ಸಾದ್ಯವಿಲ್ಲ. ಅವೈಜ್ಞಾನಿಕವಾಗಿ ಬೆಲೆ ಏರಿಕೆ ಮಾಡಿದಾಗ ತಪ್ಪು ಅನ್ನಬಹುದು, ಆಗ ಪ್ರಶ್ನೆ ಮಾಡಬಹುದು" ಎಂದರು.

"ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಮತ್ತು ಸೆಸ್ ಏರಿಕೆ ಮಾಡಿತ್ತು. ಕರ್ನಾಟಕಕ್ಕೆ ಬರಬೇಕಿದ್ದ ಅನುದಾನವನ್ನು ಕೂಡ ಕೇಂದ್ರ ಸರ್ಕಾರ ಕೊಟ್ಟಿಲ್ಲ. ಮಹಾರಾಷ್ಟ್ರ, ತೆಲಂಗಾಣ ಸೇರಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಬೆಲೆ ಕಮ್ಮಿ ಇದೆ" ಎಂದು ಸಚಿವರು ಸಮರ್ಥಿಸಿಕೊಂಡರು.

"ಮಳೆಗಾಲದಲ್ಲಿ ಹಾಲು ಹೆಚ್ಚು ಶೇಖರಣೆ ಆಗಲಿದ್ದು, ಹಾಗಾಗಿ, 50 ಎಂಎಲ್ ಹೆಚ್ಚು ಮಾಡಿದ್ದೇವೆ. ಎರಡು ರೂ. ದರ ಹೆಚ್ಚಿಸುವ ಜೊತೆಗೆ 50 ಎಂಎಲ್ ಹಾಲು ಕೂಡ ಹೆಚ್ಚಿಸಿದ್ದೇವೆ. ರೈತರಿಗೆ ಈಗಾಗಲೇ ಐದು ರೂಪಾಯಿ ಪ್ರೋತ್ಸಾಹಧನ ಕೊಡ್ತಿದ್ದೇವೆ. ಹಾಗಾಗಿ, ಹೆಚ್ಚುವರಿ ಹಣ ಕೊಡಲ್ಲ. ಹಾಲು ಹೆಚ್ಚು ಉತ್ಪಾದನೆ ಆಗ್ತಿತ್ತು ಅದನ್ನ ಕೊಳ್ಳಲು 50 ಎಂಎಲ್ ಜಾಸ್ತಿ ಮಾಡಿದ್ದೇವೆ. ಅದಕ್ಕೆ ಎರಡು ರೂಪಾಯಿ ಪಡೆಯುತ್ತಿದ್ದೇವೆ" ಎಂದು ಹೇಳಿದರು.

ಗ್ಯಾರಂಟಿ ಯೋಜನೆಯಿಂದ ಸರ್ಕಾರದ ಖಜಾನೆ ಖಾಲಿ ಎಂದು ಪ್ರತಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿ, "ಹೊಸ ಸರ್ಕಾರ ಬಂದ ಮೇಲೆ ಗ್ಯಾರಂಟಿ ಕೊಟ್ಟು ಯಾವುದೇ ಅಭಿವೃದ್ಧಿ ನಿಲ್ಲಿಸಿಲ್ಲ. ಐದು ವರ್ಷ ಬಿಜೆಪಿಯವರು ಫೇಲ್ ಆಗಿದ್ದಕ್ಕೆ ಜನ ನಮಗೆ ಅಧಿಕಾರ ಕೊಟ್ಟಿದ್ದಾರೆ. ಕೇಂದ್ರ ಸರ್ಕಾರ ನಮಗೆ ಕೊಡಬೇಕಾದ ಎನ್‌ಡಿಆರ್‌ಎಫ್ ಅನುದಾನ ಕೊಡಲಿಲ್ಲ. ಸುಪ್ರೀಂ ಕೋರ್ಟ್​ಗೆ ಹೋಗಿ ನಾವು ಅನುದಾನ ತಂದಿದ್ದೇವೆ. ವಿರೋಧ ಪಕ್ಷದವರಿಗೆ ಕೆಲಸ ಇಲ್ಲಾ, ಹಾಗಾಗಿ ಏನೇನೋ ಮಾತಾಡ್ತಿದ್ದಾರೆ" ಎಂದು ಕಿಡಿಕಾರಿದರು.

ಚನ್ನಪಟ್ಟಣದಲ್ಲಿ ಡಿ.ಕೆ. ಶಿವಕುಮಾರ್ ವಾಸ್ತವ್ಯ ವಿಚಾರಕ್ಕೆ ಪ್ರತಿಕ್ರಿಯಿಸಿ, "ಅವರು ಅಧ್ಯಕ್ಷರು, ಕ್ಷೇತ್ರದ ವಿಚಾರ ನೋಡಿಕೊಳ್ಳುತ್ತಿದ್ದಾರೆ. ಚನ್ನಪಟ್ಟಣಕ್ಕೆ ಯಾವಾಗ ಬೇಕಾದರೂ ಚುನಾವಣೆ ಘೋಷಣೆ ಆಗಬಹುದು. ಇನ್ನು ಡಿಕೆಶಿ ಅಥವಾ ಡಿ.ಕೆ. ಸುರೇಶ್ ಯಾರು ಅಭ್ಯರ್ಥಿ ಅಂತ ತೀರ್ಮಾನ ಆಗಿಲ್ಲ. ಈ ಬಗ್ಗೆ ಸಿಎಂ, ಡಿಸಿಎಂ ಕುಳಿತು ಚರ್ಚೆ ಮಾಡುತ್ತಾರೆ" ಎಂದು ತಿಳಿಸಿದರು.

ಮಂಡ್ಯದಲ್ಲಿ ನನ್ನನ್ನು ಸೋಲಿಸಲು ಯತ್ನಿಸಿದ್ರು ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿ, "ನಮ್ಮನ್ನೂ ಸೋಲಿಸಲು ನೋಡಿದರು. ಆದರೂ ಜನ ಗೆಲ್ಲಿಸಿದ್ದಾರೆ. ನಾನು ಜೆಡಿಎಸ್ ನಲ್ಲಿ ಇಲ್ಲಾ, ನಮ್ಮ ಪಕ್ಷದ ಪರವಾಗಿ ಕೆಲಸ ಮಾಡಬೇಕು. ನಮ್ಮ ಅಭ್ಯರ್ಥಿ ಗೆಲ್ಲಿಸಲು ಕೆಲಸ ಮಾಡಿದ್ದೇವೆ. ಕುಮಾರಸ್ವಾಮಿ ಅವರು ಕೆಲಸ ಮಾಡಲಿ. ಒಂದು ವರ್ಷ ಏನೂ ಮಾತಾಡಲ್ಲ. ಕುಮಾರಸ್ವಾಮಿ ಹೊಸದಾಗಿ ಕೇಂದ್ರದಲ್ಲಿ ಮಂತ್ರಿ ಆಗಿದ್ದಾರೆ. ತಂದೆ ಮಾಡಲು ಆಗದ ಕೆಲಸ ಮಾಡ್ತೇನಿ ಅಂತಾ ಭರವಸೆ ಕೊಟ್ಟಿದ್ದಾರೆ. ಅವರು ಕೆಲಸ ಮಾಡಿದ್ರೇ ನಾನು ಹೆಚ್ಚು ಖುಷಿ ಪಡುತ್ತೇನೆ. ಈಗ ಕುಮಾರಸ್ವಾಮಿ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲ" ಎಂದರು.

ವಿಭಾಗೀಯ ಮಟ್ಟದ ಸಭೆ (ETV Bharat)

ರಾಜ್ಯದಲ್ಲಿ 7 ಹೊಸ ಕೃಷಿ ತರಬೇತಿ ಕೇಂದ್ರ: ಮತ್ತೊಂದೆಡೆ, ಬೆಳಗಾವಿ ಸುವರ್ಣಸೌಧ ಸಭಾಂಗಣದಲ್ಲಿ ಕೃಷಿ ಮತ್ತು ಜಲಾನಯನ ಇಲಾಖೆಗಳ ವಿಭಾಗೀಯ ಮಟ್ಟದ ಸಭೆ ನಡೆಸಿ ಮಾತನಾಡಿದ ಸಚಿವ ಚೆಲುವರಾಯಸ್ವಾಮಿ, ರಾಜ್ಯದಲ್ಲಿ ಈ ವರ್ಷ 7 ಜಿಲ್ಲೆಗಳಲ್ಲಿ ಹೊಸದಾಗಿ ಕೃಷಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸಲಾಗುವುದು. ಕೃಷಿಕರಿಗೆ ಯೋಜಿತ ತರಬೇತಿ ನೀಡಿ‌ ಸಾಮರ್ಥ್ಯ ಅಭಿವೃದ್ಧಿಗೆ ಕ್ರಮವಹಿಸಲಾಗುತ್ತಿದೆ.‌‌ ವಿಜಯನಗರ, ಯಾದಗಿರಿ, ಗದಗ, ಕೋಲಾರ, ಚಾಮರಾಜನಗರ, ರಾಮನಗರ, ಉಡುಪಿ ಜಿಲ್ಲೆಗಳಲ್ಲಿ ಹೊಸ ಕೃಷಿ ತರಬೇತಿ ಕೇಂದ್ರ ಪ್ರಾರಂಭ ಮಾಡಲಾಗುವುದು ಎಂದರು.

ಇದನ್ನೂ ಓದಿ:ಹಾಲಿನ ದರ ಹೆಚ್ಚಳವಾಗಿಲ್ಲ, ಹೋಟೆಲ್​ಗಳು ಕಾಫಿ, ಟೀ ದರ ಹೆಚ್ಚಿಸಲು ಹೇಗೆ ಸಾಧ್ಯ?: ಸಿಎಂ ಸಿದ್ದರಾಮಯ್ಯ - CM Siddaramaiah clarification

Last Updated : Jun 26, 2024, 5:02 PM IST

ABOUT THE AUTHOR

...view details