ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ (ETV Bharat) ಮಂಡ್ಯ:ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪರ್ಧಿಸುವ ಅವಶ್ಯಕತೆ ಇಲ್ಲ. ಈಗಾಗಲೇ ಅವರು ಶಾಸಕರಾಗಿ, ಸಚಿವರಾಗಿದ್ದಾರೆ. ಎಂಪಿ ಚುನಾವಣೆಯಲ್ಲಿ ಸೋತಿರುವುದಕ್ಕೆ ಡಿ.ಕೆ.ಸುರೇಶ್‌ಗೆ ಅವಕಾಶ ಇದೆ. ಆದರೆ, ಅವರು ಸ್ಪರ್ಧಿಸಲ್ಲ ಎಂದು ಹೇಳಿದ್ದಾರೆ. ಸಿಎಂ, ಡಿಸಿಎಂ ಸೇರಿ ಅಭ್ಯರ್ಥಿಯನ್ನು ತೀರ್ಮಾನಿಸುತ್ತಾರೆ. ಅಚ್ಚರಿ ಅಭ್ಯರ್ಥಿಯ ಬಗ್ಗೆ ಕಾದುನೋಡೋಣ ಎಂದು ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಮಂಡ್ಯದ ಕೆಆರ್ಎಸ್ನಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಟ ದರ್ಶನ್ ಬಂಧನದ ಕುರಿತು ಮಾತನಾಡುತ್ತಾ, ಸಿಎಂ ಯಾವ ಒತ್ತಡಕ್ಕೂ ಮಣಿಯುವುದಿಲ್ಲ. ಆತ್ಮೀಯತೆ ಇದ್ದ ಮಾತ್ರಕ್ಕೆ ತಪ್ಪು ಮಾಡಲ್ಲ ಅಂತಲ್ಲ. ಉದ್ದೇಶಪೂರ್ವಕವೋ, ಆಕಸ್ಮಿಕವೋ ಗೊತ್ತಿಲ್ಲ ಎಂದರು.
ಈ ಪ್ರಕರಣದ ತೀರ್ಮಾನವನ್ನು ಕೋರ್ಟ್ ಮಾಡುತ್ತದೆ. ಪ್ರಾಮಾಣಿಕತೆಯಿಂದ ತನಿಖೆ ನಡೆಸಿ, ಕ್ರಮವಹಿಸಲು ಸರ್ಕಾರ ಬದ್ಧವಾಗಿದೆ. ಕಲಾವಿದ ಅಂದಮೇಲೆ ಎಲ್ಲರ ಜೊತೆ ಸ್ನೇಹ, ಪರಿಚಯ ಇರುತ್ತದೆ. ಆದರೆ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ಯಾವ ಮಂತ್ರಿಯೂ ಇದರಲ್ಲಿ ಮಧ್ಯಪ್ರವೇಶಿಸಿಲ್ಲ ಎಂದರು.
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಅಭಿಯೋಜಕರನ್ನು ಬದಲಾವಣೆ ಮಾಡಿದ್ರೆ ತಪ್ಪೇನು? ಎಂಬ ಗೃಹ ಸಚಿವರ ಹೇಳಿಕೆ ವಿಚಾರವಾಗಿ ಮಂಡ್ಯದ ಬೆಟ್ಟಹಳ್ಳಿಯಲ್ಲಿ ಎನ್.ಚಲುವರಾಯಸ್ವಾಮಿ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಸಚಿವಾಲಯ, ಸಿಎಂ ರಿವ್ಯೂ ಮಾಡಿ ಡಿಸಿಷನ್ ತೆಗೆದುಕೊಳ್ಳಬೇಕಾಗುತ್ತದೆ. ಬದಲಾವಣೆ ಮಾಡಿದ್ರೆ ಸಿಎಂ ಅಥವಾ ಗೃಹ ಸಚಿವರಿಗೆ ವರದಿ ಸಿಗುತ್ತದೆ. ಮಾಹಿತಿ ಇಲ್ಲದೇ ನಾನು ರಿಯಾಕ್ಟ್ ಮಾಡೋದು ಸೂಕ್ತವಲ್ಲ ಎಂದರು.
ಸಚಿವ ಎನ್.ಚಲುವರಾಯಸ್ವಾಮಿ ಪ್ರತಿಕ್ರಿಯೆ (ETV Bharat) ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ ವಿಚಾರವಾಗಿ ಮಾತನಾಡುತ್ತಾ, ಪ್ರತಿಭಟನೆ ಮಾಡಲು ಬಿಜೆಪಿಯವರಿಗೆ ಯಾವ ನೈತಿಕ ಹಕ್ಕಿದೆ?. ಇದರಲ್ಲಿ ರಾಜಕೀಯ ಅವಶ್ಯಕತೆ ಇದ್ಯಾ?. ಪೆಟ್ರೋಲ್ 70 ರಿಂದ 100 ಹೋದಾಗ ಏನ್ ಮಾಡ್ತಿದ್ದರು?. ಮನಮೋಹನ್ ಸಿಂಗ್ ಸರ್ಕಾರ 1 ಲಕ್ಷ ಕೋಟಿ ಕೊಟ್ಟು ಸಬ್ಸಿಡಿ ನೀಡಿ ತೈಲ ಬೆಲೆ ಕಡಿಮೆ ಮಾಡಿದ್ರು. ಮಹಾರಾಷ್ಟ್ರ, ಮಧ್ಯಪ್ರದೇಶ, ಕೇರಳದಲ್ಲಿ ಬೆಲೆ ಎಷ್ಟಿದೆ?. ರೈತರಿಗೆ ಅನುಕೂಲ ಮಾಡಬೇಕು, ಅಭಿವೃದ್ದಿ ಮಾಡಬೇಕು ಅಂದಾಗ ಬೆಲೆ ಏರಿಕೆಯಾಗುತ್ತೆ. ಟ್ಯಾಕ್ಸ್ ಇಲ್ಲದೆ ಸರ್ಕಾರ ನಡೆಸೋಕೆ ಆಗುತ್ತಾ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರೇಣುಕಾಸ್ವಾಮಿ ಕೊಲೆ ಕೇಸ್: ಎಸ್ಪಿಪಿ ಬದಲಾವಣೆಗೆ ಒತ್ತಡವಿಲ್ಲ, ಒತ್ತಡ ಹಾಕಿದರೆ ಕೇಳುವುದಿಲ್ಲ- ಸಿಎಂ - CM Siddaramaiah