ಕರ್ನಾಟಕ

karnataka

ದೇವೇಗೌಡರ ಕುಟುಂಬಕ್ಕೆ ಈ ರೀತಿ ಆಗ್ತಿರೋದು ನಮಗೆ ಮುಜುಗರ: ಸಚಿವ ಚಲುವರಾಯಸ್ವಾಮಿ - MINISTER CHALUVARAYASWAMY

By ETV Bharat Karnataka Team

Published : Jun 23, 2024, 3:01 PM IST

ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡರ ಕುಟುಂಬಕ್ಕೆ ಈ ರೀತಿ ಆಗ್ತಿರೋದು ನಮಗೆ ಮುಜುಗರ ತಂದಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು. ಇದೇ ವೇಳೆ ಕಾವೇರಿ ನೀರು ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರುವ ಹರಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದರು.

EMBARRASSED  DEVEGOWDA FAMILY  MANDYA
ಸಚಿವ ಚಲುವರಾಯಸ್ವಾಮಿ ಹೇಳಿಕೆ (ETV Bharat)

ಸಚಿವ ಚಲುವರಾಯಸ್ವಾಮಿ ಹೇಳಿಕೆ (ETV Bharat)

ಮಂಡ್ಯ:ಶೀಘ್ರದಲ್ಲೇ ನೀರು ಸಲಹಾ ಸಮಿತಿ ಸಭೆ ಕರೆದು ನಾಲೆಗಳಿಗೆ ನೀರು ಹರಿಸುವ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದರು.

ನಾವು ನಿರೀಕ್ಷಿಸಿದ ಮಟ್ಟದಲ್ಲಿ ಮೇಲಿಂದ ನೀರು ಹರಿದು ಬರ್ತಿಲ್ಲ. ಭತ್ತ ನಾಟಿ ಮಾಡಲು ಜುಲೈ 15ರ ವರೆಗೂ ಟೈಂ ಇದೆ. ಹಾಗಾಗಿ ನಾವು ನಿರೀಕ್ಷೆ ಇಟ್ಟುಕೊಳ್ಳೋಣ. ಮಳೆ ಬಂದು ಡ್ಯಾಂ ನೀರಿನ ಮಟ್ಟ 110 ಅಡಿಗೆ ಏರಿದ್ರೆ ಸಮಸ್ಯೆ ಇರೋದಿಲ್ಲ. ಆದ್ರೆ ಈಗ ರೈತರು ನೀರು ಕೇಳ್ತಿರೋದು ಕೆರೆ ಕಟ್ಟೆ ತುಂಬಿಸಿಕೊಳ್ಳಲು. ಹಾಗಾಗಿ ಶೀಘ್ರವಾಗಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸೂರಜ್ ರೇವಣ್ಣ ಬಂಧನ ವಿಚಾರಕ್ಕೆ ಪ್ರತಿಕ್ರಿಯೆ: ಕಾನೂನಿದೆ.. ಎರಡೂ ಕಡೆಯಿಂದ ದೂರು ದಾಖಲಾಗಿದೆ. ಪೊಲೀಸರು ಮತ್ತು ಎಸ್​ಐಟಿ ತಂಡ ತನಿಖೆ ನಡೆಸ್ತಿದೆ. ದೇವೇಗೌಡರ ಕುಟುಂಬಕ್ಕೆ ಈ ರೀತಿ ಆಗ್ತಿರೋದು ನಮಗೂ ಮುಜುಗರ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜಕಾರಣ ತೀರಾ ವೈಯಕ್ತಿಕವಾಗಿ ಹೋಗಬಾರದು. ಅಭಿವೃದ್ಧಿ ಮೇಲೆ ರಾಜಕಾರಣ ಮಾಡಬಹುದು ಎಂದರು.

ಮದ್ದೂರು ಶಾಸಕ ಕದಲೂರು ಉದಯ್ ಗನ್ ಮ್ಯಾನ್​ಗೂ ದರ್ಶನ್ ಬಾಡಿಗಾರ್ಡ್​ಗೂ ಗಲಾಟೆ ನಡೆದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ಪೊಲೀಸರಿದ್ದಾರೆ. ಅವರ ಇಲಾಖೆಯವರೇ ಇರೋದ್ರಿಂದ ತನಿಖೆ ಮಾಡ್ತಾರೆ. ಅವರಿಬ್ಬರು ಸ್ನೇಹಿತರಾ ಏನು ಎಂಬ ಬಗ್ಗೆ ಗೊತ್ತಿಲ್ಲ ಎಂದು ಹೇಳಿದರು.

ದೇವಗಿರಿ ಹಿಲ್ಸ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿರುವ ವಿಚಾರಕ್ಕೆ ಮಾತನಾಡಿದ ಅವರು, ಈ ಹಿಂದೆ ಅವರು ಸಿಎಂ ಆಗಿದ್ದಾಗ ಆ ಯೋಜನೆ ವಿರೋಧಿಸಿದ್ದರು. ಆ ಪ್ರದೇಶದಲ್ಲಿ ಗಣಿಗಾರಿಕೆಗೆ ಹೋದವರು ಅಧಿಕಾರ ಕಳೆದುಕೊಳ್ತಾರೆ ಎಂಬ ನಂಬಿಕೆ ಇದೆ. ಕುಮಾರಸ್ವಾಮಿ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡ್ತಾರೆ ಎಂಬ ವಿಶ್ವಾಸ ಇದೆ. ಅಭಿವೃದ್ಧಿಗೆ ಪೂರಕವಾಗಿ ಕೆಲಸ‌ಮಾಡಿದ್ರೆ ನಮ್ಮದೂ ಸಹಕಾರ ಇದೆ. ಕುಮಾರಸ್ವಾಮಿ ವರ್ಸಸ್ ರಾಜ್ಯ ಸರ್ಕಾರ ಎಂಬಂಥಹ ಸ್ಥಿತಿ ನಿರ್ಮಾಣವಾಗಿಲ್ಲ ಎಂದು ಸಚಿವ ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ಬೀಳಲಿದೆ ಎಂಬ ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರನ್ನ ಕಾಯ್ತಾ ಇರಲು ಹೇಳಿ. ಅವರೇನು ರಾಜ್ಯಕ್ಕೆ ಬರ್ತಾರಾ.? ಹಾಗೆ ನೋಡಿದ್ರೆ ನಮ್ಮ ಸರ್ಕಾರ ಸುಭದ್ರವಾಗಿದೆ. ಕೇಂದ್ರ ಸರ್ಕಾರವೇ ಅಪಾಯದಲ್ಲಿದೆ ಎಂದು ತಿರುಗೇಟು ನೀಡಿದ್ರು.

ಚನ್ನಪಟ್ಟಣ ಉಪ ಚುನಾವಣೆ‌ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಚುನಾವಣೆ ಘೋಷಣೆಯಾಗಲಿ. ಅಲ್ಲಿ ಗೆಲ್ಲುವ ಅಭ್ಯರ್ಥಿಯನ್ನ ಕಣಕ್ಕಿಳಿಸ್ತೀವಿ. ಯೋಗೇಶ್ವರ್ ಎತ್ತರದಲ್ಲಿದ್ದಾರೆ. ಕುಮಾರಸ್ವಾಮಿ ಅವರಿಗಿಂತಲೂ ಎತ್ತರದಲ್ಲಿದ್ದಾರೆ. ಅವರ ಹಾಗೆ ನಾವು ತೊಡೆ ತಟ್ಟುವ ಸ್ಥಿತಿಯಲ್ಲಿಲ್ಲ ಎಂದು ಹೇಳಿದರು.

ಓದಿ:ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಸೂರಜ್ ರೇವಣ್ಣ ಬಂಧನ - Suraj Revanna Arrest

ABOUT THE AUTHOR

...view details