ಬೆಳಗಾವಿ:ಮುಹೂರ್ತ ಫಿಕ್ಸ್ ಆಗಿರುವುದು ಯಡಿಯೂರಪ್ಪನವರ ಮಗ ವಿಜಯೇಂದ್ರ ರಾಜೀನಾಮೆಗೆ ಎಂದು ಸಚಿವ ಬೈರತಿ ಸುರೇಶ್ ತಿರುಗೇಟು ನೀಡಿದ್ದಾರೆ.
ಸುವರ್ಣಸೌಧದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವವಾಗಲ್ಲ. ಬಿಜೆಪಿಯವರ ಗುಂಪು ಜಗಳವನ್ನು ಮೊದಲು ತೀರಿಸಿಕೊಳ್ಳಲು ಹೇಳಿ. ಬೆಳಗ್ಗೆದ್ದರೆ ಈ ಕಡೆ ಯತ್ನಾಳ್, ರಮೇಶ್ ಜಾರಕಿಹೊಳಿ, ಆ ಕಡೆ ವಿಜಯೇಂದ್ರ ಫೈಟಿಂಗ್ ಇದೆಯಲ್ಲ, ಅದನ್ನು ನಿಲ್ಲಿಸಲು ಹೇಳಿ. ಆ ಮೇಲೆ ಈ ಕಡೆ ಬರಲು ಹೇಳಿ. ನಮ್ಮಲ್ಲಿ ಯಾವುದೇ ಫೈಟಿಂಗ್ ಇಲ್ಲ. ಈ ಬಗ್ಗೆ ಈಗಾಗಲೇ ಸಿಎಂ, ಡಿಸಿಎಂ ಹೇಳಿದ್ದಾರೆ. ಸಿಎಂ ಹೇಳಿಕೆಯೇ ಅಂತಿಮ ಎಂದು ಡಿಸಿಎಂ ಕೂಡಾ ಹೇಳಿದ್ದಾರೆ. ಸಿಎಂ ಹೇಳಿದ ಮೇಲೆ ಅದೇ ಅಂತಿಮವಾಯಿತಲ್ಲ ಎಂದರು.
ಮುಡಾ ಕುರಿತು ಪ್ರತಿಕ್ರಿಯಿಸುತ್ತಾ, ಕಳೆದ ಅಧಿವೇಶನದಲ್ಲಿ ಮುಡಾದಲ್ಲಿ ಅಕ್ರಮ ನಡೆದಿದೆ ಎಂಬ ಆಪಾದನೆ ಮಾಡಿದ ನಂತರ ನಿವೃತ್ತ ನ್ಯಾಯಮೂರ್ತಿ ದೇಸಾಯಿ ಅವರ ನೇತೃತ್ವದಲ್ಲಿ ನಾವು ಸಮಿತಿ ಮಾಡಿದ್ದೇವೆ. ಕೋರ್ಟ್ನಲ್ಲಿ ಕೇಸ್ ನಡೆಯುತ್ತಿದೆ. ಇನ್ನೇನು ಮಾಡಬೇಕು?. ನಾವೇನು ನೇಣು ಹಾಕಿಕೊಳ್ಳಬೇಕಾ?. ಬಿಜೆಪಿಯವರು ಕ್ಷುಲ್ಲಕ ರಾಜಕಾರಣ ಮಾಡುವುದನ್ನು ಬಿಡಬೇಕು ಎಂದು ಹೇಳಿದರು.
ಉತ್ತರ ಕರ್ನಾಟಕದ ಸಮಸ್ಯೆಗಳಿವೆ. ರಾಜ್ಯದ ಸಮಸ್ಯೆಗಳಿವೆ. ಇವುಗಳ ಪರಿಹಾರಕ್ಕೆ ಅವರು ಸಲಹೆ ನೀಡುವ ಕೆಲಸ ಮಾಡಬೇಕೇ ಹೊರತು ಇಂಥ ವಿಚಾರಗಳನ್ನಿಟ್ಟುಕೊಂಡು ರಾಜಕಾರಣ ಮಾಡುವುದರಲ್ಲಿ ಏನೂ ಪ್ರಯೋಜನವಿಲ್ಲ ಎಂದು ತಿಳಿಸಿದರು.