ಕರ್ನಾಟಕ

karnataka

ETV Bharat / state

ಐತಿಹಾಸಿಕ ಬೆಂಗಳೂರು ಕರಗಕ್ಕೆ ಸಾಕ್ಷಿಯಾದ ಭಕ್ತ ಸಮೂಹ: 'ಗೋವಿಂದ ಗೋವಿಂದ’ ನಾಮಸ್ಮರಣೆ - BENGALURU KARAGA UTSAV - BENGALURU KARAGA UTSAV

ಸಾಂಪ್ರದಾಯಿಕ ಬೆಂಗಳೂರು ಕರಗ ಉತ್ಸವವು ಲಕ್ಷಾಂತರ ಭಕ್ತರು ಸಾಕ್ಷಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.

karaga-utsav
ಕರಗ

By ETV Bharat Karnataka Team

Published : Apr 24, 2024, 7:48 AM IST

Updated : Apr 24, 2024, 9:05 AM IST

ಬೆಂಗಳೂರು:ಆಧುನಿಕತೆಯ ನಡುವೆಯೂ ರಾಜಧಾನಿಯ ಐತಿಹಾಸಿಕ ಹಾಗೂ ಸಾಂಪ್ರದಾಯಿಕ ಬೆಂಗಳೂರು ಕರಗ ಅದ್ಧೂರಿಯಾಗಿ ನೇರವೇರಿತು.
ನಗರದ ಹಳೆಯ ಪೇಟೆ ಬೀದಿಗಳಲ್ಲಿ ಮಲ್ಲಿಗೆಯ ಕಂಪು, ಸದಾ ಕಿಕ್ಕಿರಿದ ಜನ ಹಾಗೂ ವಾಹನ ದಟ್ಟಣೆಯಿಂದ ಗಿಜುಗುಡುತ್ತಿದ್ದ ರಸ್ತೆಗಳಲ್ಲಿ ಮಂಗಳವಾರ ರಾತ್ರಿಯಿಡಿ ಗೆಜ್ಜೆ ಸದ್ದು, ಪೂಜಾ ಕುಣಿತ, ವಾದ್ಯಗಳ ಸದ್ದು ಮೊಳಗಿದವು. ಇದರ ನಡುವೆ ಮಧ್ಯರಾತ್ರಿ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನದಿಂದ ಹೊರಟ ಹೂವಿನ ಕರಗಕ್ಕೆ ಲಕ್ಷಾಂತರ ಭಕ್ತರು ಸಾಕ್ಷಿಯಾದರು.

ಕರಗ

ಹೂವು ಹಾಗೂ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದ ಮಹಾರಥದಲ್ಲಿ ಅರ್ಜುನ ಹಾಗೂ ದ್ರೌಪದಿ ದೇವಿಯ ಉತ್ಸವ ಮೂರ್ತಿಗಳನ್ನು ಹಾಗೂ ಮುತ್ಯಾಲಮ್ಮ ದೇವಿಯನ್ನು ಹೊತ್ತ ರಥದೊಂದಿಗೆ ರಾತ್ರಿ ಒಂದು ಗಂಟೆ ಸುಮಾರಿಗೆ ಉತ್ಸವ ಮೂರ್ತಿಗಳು ಸಾಗಿದವು. ಇದರ ಬೆನ್ನಲ್ಲೇ ಮಲ್ಲಿಗೆ ಹೂವಿನಿಂದ ಅಲಂಕೃತವಾಗಿದ್ದ ಹೂವಿನ ಕರಗ ಹೊತ್ತು ಅರ್ಚಕ ಜ್ಞಾನೇಂದ್ರ ದೇವಾಲಯದಿಂದ ಹೊರ ಬರುತ್ತಿದ್ದಂತೆ ನೆರೆದಿದ್ದ ಭಕ್ತರು ‘ಗೋವಿಂದ ಗೋವಿಂದ’ ನಾಮಸ್ಮರಣೆ ಮಾಡುತ್ತ ಕರಗದ ಮೇಲೆ ಹೂವಿನ ಮಳೆಗರೆದರು.

ಶಕ್ತಿ ದೇವತೆ ದ್ರೌಪದಿ ದೇವಿಯ ಹೆಸರಿನಲ್ಲಿ ನಡೆಯುವ ಹೂವಿನ ಕರಗ ಉತ್ಸವದ ನಿಮಿತ್ತ ಮಂಗಳವಾರ ಸಂಜೆ ಚಂದ್ರೋದಯವಾಗುತ್ತಿದ್ದಂತೆ ಶ್ರೀ ಧರ್ಮರಾಯ ದೇವಸ್ಥಾನದ ಅರ್ಚಕರಾದ ಜ್ಞಾನೇಂದ್ರ ಅವರು, ಗೌಡರು, ಗಣಾಚಾರಿ, ಗಂಟೆ ಪೂಜಾರಿಯ ಉಸ್ತುವಾರಿಯಲ್ಲಿ ನೂರಾರು ವೀರಕುಮಾರರ ನಡುವೆ ಮಂಗಳವಾದ್ಯಗಳೊಂದಿಗೆ ಕಬ್ಬನ್ ಪಾರ್ಕ್‌ನಲ್ಲಿರುವ ಕರಗದ ಕುಂಟೆಯಲ್ಲಿ ಪುಣ್ಯ ಸ್ನಾನ ಮಾಡಿ ಗಂಗಾ ಪೂಜೆ ನೆರವೇರಿಸಿದರು.

ಕರಗ

ಅಲ್ಲಿಂದ ಸಂಪಂಗಿ ಕೆರೆಯ ಶಕ್ತಿ ಪೀಠದಲ್ಲಿ ಪೂಜೆ ಸಲ್ಲಿಸಿ ದೇವಸ್ಥಾನಕ್ಕೆ ಹಿಂದಿರುಗಿ ಧಾರ್ಮಿಕ ಆಚರಣೆಗಳಲ್ಲಿ ತೊಡಗಿಕೊಂಡರು. ಕರಗ ಶಕೋತ್ಸವ ಹಿನ್ನೆಲೆಯಲ್ಲಿ ಮಂಗಳವಾರ ಮಧ್ಯಾಹ್ನದಿಂದಲೇ ನಗರದ ನಾನಾ ಭಾಗಗಳಿಂದ ಪಲ್ಲಕ್ಕಿ ಉತ್ಸವ ಆರಂಭವಾಯಿತು. ಅಣ್ಣಮ್ಮ ದೇವಿ ಸೇರಿ ನಗರದ ಸುತ್ತಮುತ್ತಲ ದೇವಾಲಯಗಳಿಂದ ಉತ್ಸವ ಮೂರ್ತಿಗಳನ್ನು ಹೊತ್ತ ರಥಗಳು ರಾತ್ರಿ ವೇಳೆಗೆ ಮಾರುಕಟ್ಟೆ ಪ್ರದೇಶ ತಲುಪಿದವು.

ಇದರಿಂದ ಕೆ.ಆರ್.ರಸ್ತೆ, ಮೈಸೂರು ಸರ್ಕಲ್, ಚಾಮರಾಜಪೇಟೆ, ಪುರಭವನ, ನೃಪತುಂಗ ರಸ್ತೆ ಸೇರಿದಂತೆ ಮಾರುಕಟ್ಟೆಯ ಸುತ್ತಮುತ್ತಲ ರಸ್ತೆಗಳಲ್ಲಿ ಮಧ್ಯಾಹ್ನ ಉಂಟಾದ ಸಂಚಾರ ದಟ್ಟಣೆ ರಾತ್ರಿಯೂ ಮುಂದುವರೆದಿದ್ದು, ಸುಗಮ ಸಂಚಾರಕ್ಕೆ ಪೊಲೀಸರು ಹರ ಸಾಹಸ ಪಡುವಂತಾಯಿತು.
ಕರಗ ಉತ್ಸವ ವೀಕ್ಷಿಸಲು ಮಾಲೂರು, ಹೊಸಕೋಟೆ, ನೆಲಮಂಗಲ, ತುಮಕೂರು, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಕೋಲಾರ, ತಮಿಳುನಾಡಿನ ಹೊಸೂರು, ಕೃಷ್ಣಗಿರಿ, ಧರ್ಮಪುರಿ, ಸೇಲಂ, ಸುಳಗಿರಿ, ಚಪ್ಪಡಿ, ಡೆಂಕಣಿಕೋಟೆ, ಗುಮ್ಮಳಾಪುರ, ಈರೋಡ್, ಸೇಲಂ ಮುಂತಾದ ಕಡೆಗಳಿಂದ ಬೆಂಗಳೂರು ಕರಗಕ್ಕೆ ಭಕ್ತಸಾಗರ ಹರಿದುಬಂದಿತ್ತು.

ಕರಗ

ಇದರ ಜತೆಗೆ ಮಹಾರಾಜರ ಕಾಲದ ಬೆಂಗಳೂರಿನ ತಿಗಳರಪೇಟೆ, ರಾಣಾಸಿಂಗ್ ಪೇಟೆ, ಅರಳೆಪೇಟೆ, ಅಕ್ಕಿಪೇಟೆ, ಬಳೆಪೇಟೆ, ಕಬ್ಬನ್‌ಪೇಟೆ, ಚಿಕ್ಕಪೇಟೆ ಇತ್ಯಾದಿಗಳಲ್ಲೆಲ್ಲ ಅಧಿಕ ಸಂಖ್ಯೆಯಲ್ಲಿರುವ ಕುಲಬಾಂಧವರು ಕಳೆದ ಒಂಬತ್ತು ದಿನಗಳಿಂದ ಕರಗ ಉತ್ಸವ ಆಚರಣೆಯಲ್ಲಿ ತೊಡಗಿದ್ದಾರೆ.

ಕರಗ ಸಂಚಾರ ಮಾರ್ಗ:ಮಧ್ಯರಾತ್ರಿ 12ರ ವೇಳೆಗೆ ಧರ್ಮರಾಯಸ್ವಾಮಿ ದೇವಾಲಯದಿಂದ ಬಿಜಯ ಮಾಡಿಸಿ ಹೊರಡುವ ಕರಗ ಶಕ್ತ್ಯೋತ್ಸವ ಹಲಸೂರು ಪೇಟೆಯ ಆಂಜನೇಯಸ್ವಾಮಿ, ಶ್ರೀ ರಾಮ ದೇವಾಲಯದಲ್ಲಿ ಪೂಜೆ ಸ್ವೀಕರಿಸಿ, ನಗರ್ತಪೇಟೆ, ಸಿದ್ದಣ್ಣ ಗಲ್ಲಿ, ಕಬ್ಬನ್‍ಪೇಟೆ, ಗಾಣಿಗರ ಪೇಟೆ, ದೊಡ್ಡಪೇಟೆಯಿಂದ ಶ್ರೀಕೃಷ್ಣರಾಜೇಂದ್ರ ಮಾರುಕಟ್ಟೆ ತಲುಪಲಿದ್ದಿ, ಈ ಮಾರ್ಗಗಳಲ್ಲಿನ ಎಲ್ಲ ದೇವಾಲಯಗಳಲ್ಲಿ ಪೂಜೆ ಸ್ವೀಕರಿಸಿ ನಂತರ ಮಸ್ತಾನ್ ಸಾಹೇಬರ ದರ್ಗಾಕ್ಕೆ ಭೇಟಿ ನೀಡಿ, ಅಲ್ಲಿಂದ ಬಳೇಪೇಟೆ ಹಳೇಗರಡಿ, ಅಣ್ಣಮ್ಮನ ದೇವಾಲಯಕ್ಕೆ ತೆರಳಲಿದೆ.

ಬಳಿಕ ಕಿಲಾರಿ ರಸ್ತೆ, ಯಲಹಂಕ ಗೇಟ್, ಅವೆನ್ಯೂ ರಸ್ತೆ, ಕುಂಬಾರಪೇಟೆ, ಗೊಲ್ಲರಪೇಟೆ, ತಿಗಳರ ಪೇಟೆಗಳಲ್ಲಿರುವ ಕುಲಬಾಂಧವರ ಮನೆಗಳಲ್ಲಿ ಮತ್ತು ಭಕ್ತರಿಂದ ಪೂಜೆ ಮಾಡಿಸಿಕೊಂಡು ಹಾಲುಬೀದಿ, ಕಬ್ಬನ್‍ಪೇಟೆ, ಸುಣ್ಣಕಲ್ ಪೇಟೆ ಮಾರ್ಗವಾಗಿ ಕುಲಪುರೋಹಿತರ ಮನೆಗಳಲ್ಲಿ ಪೂಜೆ ಸ್ವೀಕರಿಸಿ, ನರಸಿಂಹ ಜೋಯಿಸ್‍ಗಲ್ಲಿ ಮಾರ್ಗವಾಗಿ ಸೂರ್ಯೋದಯದ ವೇಳೆಗೆ ದೇವಾಲಯವನ್ನು ತಲುಪಿತು.

ಇದನ್ನೂ ಓದಿ:ಬೆಂಗಳೂರು ಕರಗ: ಈ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ - liquor sale ban

Last Updated : Apr 24, 2024, 9:05 AM IST

ABOUT THE AUTHOR

...view details