ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಾರುತ ಚುರುಕುಗೊಂಡಿದ್ದು ಎಲ್ಲೆಡೆ ಮಳೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಕರಾವಳಿ ಮತ್ತು ಮಲೆನಾಡಿನ ಆರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಮುಂದಿನ 24 ಗಂಟೆಗಳ ಕಾಲ ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಮತ್ತು ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಹಾಸನ ಜಿಲ್ಲೆಗೆ ಆರೇಂಜ್ ಅಲರ್ಟ್ ನೀಡಲಾಗಿದೆ. ಇನ್ನು ಉತ್ತರ ಒಳನಾಡಿನ ಬೆಳಗಾವಿ, ಬೀದರ್, ರಾಯಚೂರು, ಯಾದಗಿರಿ, ಕಲಬುರಗಿ ಜಿಲ್ಲೆಗಳು ಮತ್ತು ದಕ್ಷಿಣ ಒಳನಾಡಿನ ಮೈಸೂರು ಜಿಲ್ಲೆಗೆ ಯೆಲ್ಲೋ ಅಲರ್ಟ್ ಪ್ರಕಟಿಸಲಾಗಿದೆ.
ಇಂದು ಮತ್ತು ನಾಳೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಭಾರಿ ಮಳೆ ಆಗಲಿದೆ. ನಿರಂತರ ಗಾಳಿ ಸಹ ಇರಲಿದ್ದು ಪ್ರತಿ ಗಂಟೆಗೆ 30 ರಿಂದ 40 ಕಿಮೀ ವೇಗ ತಲುಪುವ ಸಾಧ್ಯತೆಯಿದೆ. ದಕ್ಷಿಣ ಒಳನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಗಾಳಿಯು 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಲಿದ್ದು ಅತಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಒಳನಾಡಿನ ಹಾಸನ ಜಿಲ್ಲೆಯ ಒಂದು ಅಥವಾ ಎರಡು ಸ್ಥಳಗಳಲ್ಲಿ ನಿರಂತರ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಉಳಿದಂತೆ ಕಲಬುರಗಿ, ಬೀದರ್, ಬೆಳಗಾವಿ, ರಾಯಚೂರು, ಯಾದಗಿರಿ, ಮೈಸೂರು ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಸಹ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು, ಒಳನಾಡಿನ ಉಳಿದ ಜಿಲ್ಲೆಗಳ ಬಹುತೇಕ ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಂಭವವಿದೆ ಎಂದು ಮಾಹಿತಿ ನೀಡಿದೆ.