ಚಾಮರಾಜನಗರ: ಎತ್ತ ನೋಡಿದರತ್ತ ಜನಸಾಗರ, ಮಕ್ಕರಿಯಲ್ಲಿ ಮಾಂಸ ತುಂಬಿಕೊಂಡು ಬಗೆಬಗೆದು ವಿತರಿಸುತ್ತಿರುವ ಜನ, ಈ ಅದ್ಧೂರಿ ಆಚರಣೆ, ಭರ್ಜರಿ ಬಾಡೂಟ ಕಂಡುಬಂದಿದ್ದು ಅಂಕಾಳ ಪರಮೇಶ್ವರಿ ಜಾತ್ರೆಯಲ್ಲಿ. ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಸಮೀಪ 2 ವರ್ಷಕ್ಕೊಮ್ಮೆ ನಡೆಯುವ ಅಂಕಾಳ ಪರಮೇಶ್ವರಿ ಜಾತ್ರೆಯು ಭಾನುವಾರ ವಿಜೃಂಭಣೆಯಿಂದ ನಡೆದಿದ್ದು, ಸಾವಿರಾರು ಮಂದಿ ಸಹಪಂಕ್ತಿ ಭೋಜನ ಸೇವನೆ ಮಾಡಿದರು.
ಮಣ್ಣಿನಿಂದ ತಯಾರಿಸಿದ ದೇವರ ಮಂಟಪದಲ್ಲಿ ಅಂಕಾಳ ಪರಮೇಶ್ವರಿ ಮೂರ್ತಿ ತಯಾರಿಸಿ 48 ತಾಸು ಉಪವಾಸವಿದ್ದ ಅರ್ಚಕರಾದ ತಾಂಡವಶೆಟ್ಟಿ, ನಟರಾಜು, ಮಹಾದೇವಣ್ಣ ಎಂಬವರು ಪೂಜೆ ಸಲ್ಲಿಸಿದ ಬಳಿಕ 250ಕ್ಕೂ ಕುರಿ, ಮೇಕೆಗಳನ್ನು ಬಲಿ ಕೊಟ್ಟು ಎಲ್ಲರೂ ಸೇರಿ ಅಡುಗೆ ತಯಾರಿಸಿ 3 ಸಾವಿರಕ್ಕೂ ಅಧಿಕ ಮಂದಿಗೆ ಮಾಂಸದಡುಗೆ ಉಣಬಡಿಸಲಾಯಿತು. ಒಟ್ಟಿನಲ್ಲಿ, ಜಾತ್ರೆಗಳ ಸುಗ್ಗಿ ಕಾಲ ಇದಾಗಿದ್ದು, ವಿಶೇಷ ಆಚರಣೆ, ಬಾಡೂಟಗಳ ಮೂಲಕ ಗಡಿಜಿಲ್ಲೆ ಜನರು ಗಮನ ಸೆಳೆಯುತ್ತಿದ್ದಾರೆ.