ಬೆಂಗಳೂರು:ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜಿಸಿಟಿಯು)ಆಶ್ರಯದಲ್ಲಿ ವಿಶ್ವ ಕಾರ್ಮಿಕ ದಿನಾಚರಣೆಯನ್ನು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಆಚರಿಸಿತು. ಪ್ರೊ.ಬಾಬು ಮತ್ಯೂ ಅವರು ಮೇ ದಿನದ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಸಂವಿಧಾನದ ಪೀಠಿಕೆ ಬೋಧಿಸಿ ಭಾಷಣ ಮಾಡಿದ ಅವರು, 138 ವರ್ಷಗಳ ಹಿಂದೆ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದ ಎಂಟು ಗಂಟೆಗಳ ದುಡಿತದ ಅವಧಿಯ ಹೋರಾಟದ ಹಿನ್ನೆಲೆಯನ್ನು ವಿವರಿಸಿದರು.
ಕೇಂದ್ರ ಸರ್ಕಾರ ಈಗ ನಾಲ್ಕು ಕಾರ್ಮಿಕ ಕೋಡ್ಗಳನ್ನು ಜಾರಿ ಮಾಡಲು ಮುಂದಾಗಿದೆ. ಇವುಗಳಿಂದ ಕಾರ್ಮಿಕರು ಗಳಿಸಿಕೊಂಡಿರುವ ಅನೇಕ ಹಕ್ಕುಗಳನ್ನು ಕಳೆದುಕೊಳ್ಳಲಿದ್ದಾರೆ. ಕಾರ್ಮಿಕ ಸಂಘಟನೆಗಳ ಸತತ ಹೋರಾಟದಿಂದಾಗಿ ಇವುಗಳು ಇನ್ನೂ ಜಾರಿಯಾಗಿಲ್ಲ. ಇಂದಿನ ರಾಜ್ಯ ಸರ್ಕಾರ ರಾಜ್ಯದಲ್ಲಿ ಎಂಟು ಗಂಟೆಗಳ ದುಡಿತದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಿಸಿದೆ. ಇದು ಚರಿತ್ರಾರ್ಹ ಮೇ ದಿನದ ಹೋರಾಟದಲ್ಲಿ ಮಡಿದ ಹುತಾತ್ಮರಿಗೆ ಮಾಡಿದ ದ್ರೋಹ. ಇದನ್ನು ಈಗಿನ ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಪ್ರಸಕ್ತ ಕಾರ್ಮಿಕ ಸಮುದಾಯ ಎದುರಿಸುತ್ತಿರುವ ಅನೇಕ ಜ್ವಲಂತ ಸಮಸ್ಯೆಗಳಾದ ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣದ ವ್ಯಾಪಾರೀಕರಣ, ಭ್ರಷ್ಟಾಚಾರ ಅಸಂಘಟಿತ ವಲಯದ ಕಾರ್ಮಿಕರ ಸಮಸ್ಯೆ, ಕನಿಷ್ಠ ವೇತನದ ಹೆಚ್ಚಳವಾಗದಿರುವುದು ಮತ್ತು ಕೋಮುವಾದ. ಇವುಗಳಿಂದ ಕಾರ್ಮಿಕರ ಐಕ್ಯತೆಗೆ ಧಕ್ಕೆ ಬರುತ್ತಿರುವ ವಿಚಾರಗಳ ಬಗ್ಗೆ 12ಕ್ಕೂ ಹೆಚ್ಚು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಈ ಸಂದರ್ಭದಲ್ಲಿ ಮಾತನಾಡಿದರು. ಸುಮಾರು 6 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಅತ್ಯುತ್ಸಾಹದಿಂದ ಮೇ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜಲಮಂಡಳಿಯಿಂದ ಕಾರ್ಮಿಕ ದಿನಾಚರಣೆ:ಕಾರ್ಮಿಕ ದಿನಾಚರಣೆ ನಿಮಿತ್ತ ಬೆಂಗಳೂರಿನ ಹೆಚ್.ಆರ್.ಬಿ.ಆರ್ ಜಲಮಂಡಳಿ ಸೇವಾ ಕೇಂದ್ರದಲ್ಲಿ ಜಲಮಂಡಳಿಯ ಸಿಬ್ಬಂದಿಗಳು ಹಾಗೂ ಕುಟುಂಬ ವರ್ಗದವರಿಗೆ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಚಾಲನೆ ನೀಡಿದರು. ನಂತರ ಅವರು ಕಾರ್ಮಿಕರು ಹಾಗೂ ಕಾರ್ಮಿಕ ಕುಟುಂಬದವರೊಂದಿಗೆ ಸಂವಾದ ನಡೆಸಿದರು. ಈ ಸಂದರ್ಭದಲ್ಲಿ ಜಲಮಂಡಳಿಯ ಮುಖ್ಯ ಎಂಜಿನಿಯರ್ಗಳು ಸೇರಿದಂತೆ ಅಧಿಕಾರಿಗಳು ಇದ್ದರು.
ಇದನ್ನೂ ಓದಿ:ಕಾರ್ಮಿಕರ ದಿನಕ್ಕೆ ಡಾಲಿ 'ಕೋಟಿ' ಚಿತ್ರತಂಡದಿಂದ ವಿಶೇಷ ವಿಡಿಯೋ - Kotee