ಶಿವಮೊಗ್ಗ:ಕಣ್ಣಿಗೆ ಕಾಣುವ ದೇವರು ಅಂದರೆ ತಂದೆ-ತಾಯಿ. ಮಕ್ಕಳಿಗೆ ತಮ್ಮ ಪೋಷಕರ ಬಗ್ಗೆ ಗೌರವ, ಅವರ ಬಗ್ಗೆ ಅರಿವು ಮೂಡಿಸುವ ಸಲುವಾಗಿ ನಗರದ ಅನುಪಿನಕಟ್ಟೆ ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ಶಾಲೆಯಲ್ಲಿ ಬುಧವಾರ (ಜನವರಿ 1) ಪಾದಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ತಂದೆ-ತಾಯಂದಿರಿಗೆ ಸಾಮೂಹಿಕ ಪಾದಪೂಜೆ (ETV Bharat) ಹೊಸ ವರ್ಷ ಅಂದರೆ ಮಕ್ಕಳು ವಿದೇಶಿ ಸಂಸ್ಕೃತಿಯಂತೆ ಕೇಕ್ ಕತ್ತರಿಸಿ ಆಚರಿಸುವುದು ಸಾಮಾನ್ಯ. ಆದರೆ ಇದಕ್ಕೆ ತದ್ ವಿರುದ್ಧವಾಗಿ ರಾಮಕೃಷ್ಣ ಗುರುಕುಲ ವಸತಿ ಶಾಲೆಯಲ್ಲಿ ಜನವರಿ 1ರಂದು ವಿದ್ಯಾರ್ಥಿಗಳಿಂದ ಅವರ ತಂದೆ-ತಾಯಂದಿರ ಅಥವಾ ಪೋಷಕರ ಪಾದಪೂಜೆಯನ್ನು ಮಾಡಲಾಗುತ್ತದೆ. ಶಾಲೆಯ ಪ್ರತಿಯೊಂದು ಮಕ್ಕಳು ಪಾದಪೂಜೆಯಲ್ಲಿ ಭಾಗವಹಿಸುವುದು ಇದರ ವಿಶೇಷವಾಗಿದೆ.
ರಾಮಕೃಷ್ಣ ಆಂಗ್ಲ ಮಾಧ್ಯಮ ಗುರುಕುಲ ವಸತಿ ಶಾಲೆಯಲ್ಲಿ ಸಾಮೂಹಿಕ ಪಾದಪೂಜೆ (ETV Bharat) ಪಾದಪೂಜೆಗೆ ಪೋಷಕರು ಕಡ್ಡಾಯವಾಗಿ ಭಾಗವಹಿಸುತ್ತಾರೆ. ಮಕ್ಕಳು ಶಾಲೆಯ ಗುರುಗಳು ಹೇಳಿದಂತೆ ಪೂಜೆ ಮಾಡುತ್ತಾರೆ. ಅವರೇ ಪೂಜೆಯ ಎಲ್ಲಾ ಸಾಮಗ್ರಿಗಳನ್ನು ನೀಡುತ್ತಾರೆ. ಮೊದಲು ತಟ್ಟೆಯಲ್ಲಿ ಪೋಷಕರ ಕಾಲುಗಳನ್ನು ಸ್ವಚ್ಛವಾಗಿ ತೊಳೆಯುತ್ತಾರೆ. ನಂತರ ವಿಭೂತಿ ಅರಿಶಿಣ ಕುಂಕುಮ ಹಚ್ಚುತ್ತಾರೆ. ಪಾದಗಳಿಗೆ ಹೂವುಗಳನ್ನಿಟ್ಟು ಮಂತ್ರದ ಸಮೇತ ಅಗರಬತ್ತಿಯಿಂದ ಪೂಜೆ ಮಾಡುತ್ತಾರೆ. ಪೋಷಕರು ಮಕ್ಕಳು ಚೆನ್ನಾಗಿ ಓದಲಿ ಎಂದು ಕಂಕಣ ಕಟ್ಟುತ್ತಾ ತಮ್ಮ ಮಕ್ಕಳ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸುತ್ತಾರೆ.
ಹೂವಿಟ್ಟು, ಕಾಲು ತೊಳೆದು ಪೂಜೆ ಮಾಡಿದ ಮಕ್ಕಳು (ETV Bharat) ಬಳಿಕ ಶಾಲೆಯಲ್ಲಿ ಪಾಠ, ಆಟೋಟಗಳಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ ಬಹುಮಾನವನ್ನು ನೀಡಲಾಗುತ್ತದೆ. ಈ ಪಾದಪೂಜೆಯು ಕಳೆದ 20 ವರ್ಷಗಳಿಂದ ನಡೆದುಕೊಂಡು ಬಂದಿದೆ. ಪಾದಪೂಜೆಗೆ ಪ್ರತಿ ವರ್ಷ ಇದೇ ಶಾಲೆಯಲ್ಲಿ ಓದಿ ಉದ್ಯೋಗದಲ್ಲಿ ಇರುವ ಹಳೆಯ ವಿದ್ಯಾರ್ಥಿಗಳನ್ನು ಕರೆಯಿಸಿ ಅವರಿಂದ ಸ್ಫೂರ್ತಿದಾಯಕ ಭಾಷಣವನ್ನು ಮಾಡಿಸಲಾಗುತ್ತದೆ. ಅಲ್ಲದೆ ಜಿಲ್ಲೆಯ ವಿವಿಧ ಮಠಾಧೀಶರನ್ನು ಕರೆಯಿಸಿ ಆಶೀರ್ವಾದ ಮಾಡಿಸಲಾಗುತ್ತದೆ.
ಹೆತ್ತವರಿಗೆ ಪಾದಪೂಜೆ ಮೂಲಕ ಹೊಸ ವರ್ಷ ಬರಮಾಡಿಕೊಂಡ ಮಕ್ಕಳು (ETV Bharat) ಶಾಲೆಯಲ್ಲಿ ನಡೆದುಕೊಂಡು ಬಂದಿರುವ ಪಾದಪೂಜೆಯ ಕುರಿತು ಶಾಲೆಯ ಮುಖ್ಯಸ್ಥರಾದ ಶೋಭ ವೆಂಕಟರಮಣ ಅವರು ಹೇಳುವುದು ಹೀಗೆ.. " ಪ್ರತಿ ವರ್ಷ ನಮ್ಮ ಶಾಲೆಯಲ್ಲಿ ಜನ್ಮದಾತರಿಗೆ ಪಾದಪೂಜೆ ನಡೆಸಲಾಗುತ್ತದೆ. ಈ ಪಾದಪೂಜೆಯನ್ನು 2005-06 ರಿಂದ ನಮ್ಮ ಶಾಲೆ ಸಂಸ್ಥಾಪಕರಾದ ವೆಂಕಟರಮಣ ಅವರು ಪ್ರಾರಂಭಿಸಿದರು. ಪಾದಪೂಜೆಯ ಮುಖ್ಯ ಉದ್ದೇಶ ಎಂದರೆ, ಮಕ್ಕಳು ಪೋಷಕರನ್ನು ಕಡೆಗಣಿಸುವುದನ್ನು ತಡೆಯಲು, ಮಕ್ಕಳಿಗೆ ವಿದ್ಯೆಯ ಜೊತೆ ನೈತಿಕ ಶಿಕ್ಷಣವನ್ನು ನೀಡಬೇಕು. ಮಕ್ಕಳ ಕರ್ತವ್ಯ, ಬಾಧ್ಯತೆಗಳೇನು ಎಂಬುದನ್ನು ತಿಳಿಸಿಕೊಡುವುದು. ತಂದೆ- ತಾಯಿ ಮಕ್ಕಳ ಸಂಬಂಧವನ್ನು ಗಟ್ಟಿಗೊಳಿಸುವುದು ಪಾದಪೂಜೆಯ ಘನ ಉದ್ದೇಶವಾಗಿದೆ".
"ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನು ಕಡಿಮೆ ಮಾಡಲು, ನಮ್ಮ ಮಕ್ಕಳಲ್ಲಿ ತಂದೆ-ತಾಯಿಗಳ ಬಗ್ಗೆ ಪ್ರೀತಿ ಹೆಚ್ಚಿಸುವ ಕುರಿತು ಮಕ್ಕಳಿಗೆ ಶಿಕ್ಷಣ ನೀಡಿದರೆ, ಭವಿಷ್ಯದಲ್ಲಿ ತಮ್ಮ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಮುಂದೆ ಈ ಮಕ್ಕಳು ಸಮಾಜದಲ್ಲಿ ಮಾದರಿಯಾಗಿರುತ್ತಾರೆ ಎಂಬ ಉದ್ದೇಶದಿಂದ ಪಾದಪೂಜೆ ನಡೆಸಲಾಗುತ್ತಿದೆ" ಎಂದು ಮಾಹಿತಿ ನೀಡಿದರು.
ಪಾದಪೂಜೆಯ ಬಗ್ಗೆ ಪೋಷಕರಾದ ಸುಬ್ರಮಣ್ಯ ಮಾತನಾಡಿ, "ತಂದೆ-ತಾಯಂದಿರನ್ನು ಗೌರವಿಸುವ ಸಂಸ್ಕಾರ ಕಲಿಯಬೇಕು ಎಂಬುದು ಗುರುಕುಲ ಪದ್ಧತಿಯಲ್ಲಿತ್ತು. ಈ ಒಂದು ಅಂಶವನ್ನು ರಾಮಕೃಷ್ಣ ಆಂಗ್ಲ ಮಾಧ್ಯಮ ಶಾಲೆ ಅಳವಡಿಸಿಕೊಂಡಿದೆ. ಈಗ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬರಬೇಕು ಎಂಬುದು ಈ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ಈ ಶಾಲೆಯಲ್ಲಿ ಮಕ್ಕಳಿಗೆ ಸಂಸ್ಕಾರವನ್ನು ಕಲಿಸುತ್ತಿದ್ದಾರೆ. ಇದು ಮಕ್ಕಳಲ್ಲಿ ಹಾಗೂ ಪೋಷಕರಲ್ಲಿ ಜಾಗೃತಿ ಮೂಡುವಂತಹ ಕಾರ್ಯಕ್ರಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಾಲೆಯ ವಿದ್ಯಾರ್ಥಿನಿ ಚೈತ್ರಾ ಮಾತನಾಡಿ, "ನಾನು ಈ ಶಾಲೆಗೆ 6ನೇ ತರಗತಿಯಿಂದ ಬಂದಿದ್ದೇನೆ. ಪಾದಪೂಜೆ ಮಾಡುವುದರಿಂದ ನನಗೆ ತುಂಬ ಹೆಮ್ಮೆ ಎನಿಸುತ್ತಿದೆ. ಈ ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ಮಾತ್ರ ನಡೆಸಲಾಗುತ್ತದೆ. ಈ ಶಾಲೆಯಲ್ಲಿ ಓದುತ್ತಿರುವುದು ನನಗೆ ತುಂಬ ಸಂತೋಷವಾಗಿದೆ. ನಾನು ಪೋಷಕರ ಕಾಲನ್ನು ತೊಳೆದು, ಅರಿಶಿಣ, ಕುಂಕುಮ ಹಚ್ಚಿ, ಹೂವು ಇಟ್ಟು ಮಂತ್ರದ ಸಮೇತ ಪೂಜೆ ಮಾಡಿದ್ದು ಉತ್ತಮ ಸಂಸ್ಕಾರ ಕಲಿಸುತ್ತದೆ" ಸಂತಸ ಹಂಚಿಕೊಂಡರು.
ಇದನ್ನೂ ಓದಿ:ನಿರ್ಬಂಧದ ನಡುವೆ ಜೋಗ ನೋಡುವ ಪ್ರವಾಸಿಗರಿಗೆ ಗುಡ್ ನ್ಯೂಸ್! ಕಾರಣ ಹೀಗಿದೆ