ಬೆಳ್ತಂಗಡಿ(ದಕ್ಷಿಣ ಕನ್ನಡ): ಧರ್ಮಸ್ಥಳದಲ್ಲಿ ಬುಧವಾರ ನಡೆದ ಸಾಮೂಹಿಕ ವಿವಾಹದಲ್ಲಿ 39 ಅಂತರ್ಜಾತಿಯ ಜೋಡಿ ಸೇರಿದಂತೆ ಒಟ್ಟು 123 ವಧು–ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಸಂಜೆ 6.45ರ ಗೋದೂಳಿ ಮುಹೂರ್ತದಲ್ಲಿ ವೇದಮಂತ್ರದೊಂದಿಗೆ ನಡೆದ ಮದುವೆ ಕಾರ್ಯಕ್ರಮಕ್ಕೆ ನೂರಾರು ಜನರು ಸಾಕ್ಷಿಯಾದರು.
ಕ್ಷೇತ್ರದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಹೇಮಾವತಿ ಹೆಗ್ಗಡೆ ಅವರು ಬೀಡಿನಲ್ಲಿ ವಧುವಿಗೆ ಸೀರೆ, ರವಿಕೆ ಮತ್ತು ವರನಿಗೆ ಧೋತಿ, ಶಾಲು ವಿತರಿಸಿದರು. ಸಂಜೆ 6 ಗಂಟೆಗೆ ವಧು–ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಹಾಕಿ ಸಭಾಭವನದಲ್ಲಿ ಹಾಜರಾದರು. ಮುಹೂರ್ತಕ್ಕೆ ಅರ್ಧ ಗಂಟೆ ಮುಂಚಿತವಾಗಿ ಹೆಗ್ಗಡೆ ದಂಪತಿ ಜೊತೆ ಚಿತ್ರನಟ ದೊಡ್ಡಣ್ಣ ದಂಪತಿ ಮಂಗಳ ಸೂತ್ರ ವಿತರಿಸಿದರು. ಆಯಾ ಜಾತಿ-ಮತ ಸಂಪ್ರದಾಯದಂತೆ ಧಾರ್ಮಿಕ ವಿಧಿಗಳನ್ನು ನಡೆಸಲಾಯಿತು.
ಈ ವೇಳೆ ನಟ ದೊಡ್ಡಣ್ಣ ಮಾತನಾಡಿ, ತಾಯಿ-ತಂದೆ ತಮ್ಮ ಮಕ್ಕಳಿಗೆ ಬಾಲ್ಯದಿಂದಲೇ ಉತ್ತಮ ಸಂಸ್ಕಾರ ಕಲಿಸಿ ಸಮಾಜದ ಸಜ್ಜನರಾಗಿ, ಉತ್ತಮ ಚಾರಿತ್ರ್ಯವಂತರಾಗಿ ಮತ್ತು ಸಭ್ಯ-ಸುಸಂಸ್ಕ್ರತ ನಾಗರಿಕರನ್ನಾಗಿ ರೂಪಿಸಬೇಕು. ಈ ಮೂಲಕ ಉತ್ತಮ ಸಮಾಜ ನಿರ್ಮಾಣವಾಗಬೇಕು.
ತಾಯಿ-ತಂದೆ ಮಾಡಿದ ದಾನ-ಧರ್ಮ, ಸತ್ಕಾರ್ಯದ ಪುಣ್ಯ ಅವರ ಮಕ್ಕಳಿಗೂ ಲಭಿಸುತ್ತದೆ. ಯಾವುದೇ ನೀತಿ, ಧರ್ಮ, ಸಂಸ್ಕಾರ ಕಲಿಯಲು ವಯಸ್ಸಿನ ಇತಿ-ಮಿತಿ ಇಲ್ಲ. ರಾಮಾಯಣ ಮತ್ತು ಮಹಾಭಾರತದಂತಹ ಪೌರಾಣಿಕ ಕೃತಿಗಳ ಅಧ್ಯಯನದೊಂದಿಗೆ ಸ್ವಾಧ್ಯಾಯ ಮಾಡಬೇಕು. ದೇವಸ್ಥಾನಕ್ಕೆ ಹೋಗುವಾಗ ಮೊಬೈಲ್ ತೆಗೆದುಕೊಂಡು ಹೋಗಬಾರದು. ದೇವರ ಎದುರು ಕಣ್ಣು ಮುಚ್ಚಬಾರಾದು. ತೆರೆದ ಕಣ್ಣುಗಳಿಂದ ಏಕಾಗ್ರತೆಯೊಂದಿಗೆ ದೇವರ ದರ್ಶನ, ಧ್ಯಾನ ಮಾಡಬೇಕು ಎಂದು ಅವರು ಕಿವಿಮಾತು ಹೇಳಿದರು.
ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಸಾಮೂಹಿಕ ವಿವಾಹ ಅಂದರೆ ಸರಳ ವಿವಾಹ. ಸಾಮೂಹಿಕ ವಿವಾಹದಿಂದಾಗಿ ವರದಕ್ಷಿಣೆ ಪಿಡುಗು ಮತ್ತು ಮದುವೆಗಾಗುವ ದುಂದುವೆಚ್ಚ ಕಡಿಮೆಯಾಗಿದೆ. ನೂತನ ದಂಪತಿಗಳು ಸತ್ಸಂಗ ಮಾಡಿ ಸಂಸಾರವನ್ನು ಹೊಣೆಗಾರಿಕೆ ಮತ್ತು ಜವಾಬ್ದಾರಿಯಿಂದ ಅರ್ಥಪೂರ್ಣವಾಗಿ ನಿರ್ವಹಿಸಬೇಕು. ಮದುವೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ಸಂಸ್ಕಾರಯುತ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.