ದಾವಣಗೆರೆ: ಭಾವೈಕ್ಯತೆ ಸಾರಲು, ಸೌಹಾರ್ದತೆಯನ್ನು ಬಲಪಡಿಸಬೇಕೆಂಬ ನಿಟ್ಟಿನಲ್ಲಿ ಜಿಲ್ಲೆಯ ಹರಿಹರದ ಪ್ರಶಾಂತ್ ನಗರದಲ್ಲಿರುವ 'ಅಲಿ' ಮಸೀದಿಗೆ ಶುಕ್ರವಾರ ಅನ್ಯ ಧರ್ಮೀಯರ ದರ್ಶನಕ್ಕೆ ಅನುವು ಕೊಡಲಾಯಿತು. ಜಮಾಯತ್- ಎ-ಇಸ್ಲಾಮಿಯಾ ಹಿಂದ್ ಸಂಸ್ಥೆ ಹಮ್ಮಿಕೊಂಡ 'ಮಸೀದಿ ದರ್ಶನ' ಎಂಬ ಕಾರ್ಯಕ್ರಮದಡಿ ಹಿಂದೂಗಳು, ಕ್ರೈಸ್ತರು, ಮಹಿಳೆಯರು ಮಸೀದಿಗೆ ಸೌಹಾರ್ದಯುತವಾಗಿ ಭೇಟಿ ನೀಡಿದರು.
ಮಸೀದಿ, ನಮಾಜ್ ಎಂದರೆ ಏನು?, ಅಲ್ಲಿ ಯಾವ ರೀತಿಯ ಪ್ರವಚನ ನಡೆಯುತ್ತದೆ ಎಂದು ಅನ್ಯಧರ್ಮಿಯರು ತಿಳಿದುಕೊಳ್ಳಲು ಈ ಮಸೀದಿ ದರ್ಶನದ ಉದ್ದೇಶ. ಶುಕ್ರವಾರ ಹಿಂದೂ ಬಾಂಧವರು ಮಸೀದಿಯ ಪ್ರವೇಶಿಸುವ ಮೊದಲು ಕೈಕಾಲು ತೊಳೆದುಕೊಂಡರು. ಈ ವೇಳೆ, ಮುಸ್ಲಿಮರು ಯಾವ ರೀತಿ ಕಾಲು ತೊಳೆದುಕೊಳ್ಳುತ್ತಾರೆ (ವಝು) ಎಂದು ಮಸೀದಿಯವರು ತಿಳಿಸಿಕೊಟ್ಟರು. ಅನ್ಯ ಧರ್ಮೀಯರ ಭೇಟಿ ಹಿನ್ನೆಲೆಯಲ್ಲಿ ಉರ್ದು ಬದಲಿಗೆ ಕನ್ನಡದಲ್ಲೇ ವಿಶೇಷ ಪ್ರವಚನವೂ ನಡೆಯಿತು. ಮುಸ್ಲಿಮರು ಹಾಗೂ ಹಿಂದೂಗಳು ಸೇರಿ ಸುಮಾರು 300 ಮಂದಿ ಪಾಲ್ಗೊಂಡಿದ್ದರು.
ಹಿಂದೂಗಳು ಹೇಳಿದ್ದೇನು?: ದೇಶದಲ್ಲಿ ದ್ವೇಷ ಹಂಚುವ ಬದಲು ಈ ರೀತಿಯ ಪ್ರೀತಿ ಹಂಚಬೇಕೆಂದು ಮಸೀದಿಯಿಂದ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲರೂ ಒಟ್ಟಾಗಿ ಬಾಳಬೇಕೆಂಬ ಸಂದೇಶ ಎಲ್ಲ ಧರ್ಮದಲ್ಲೂ ಇದೆ. ಕೆಲವರು ನಾವು, ಹೆಚ್ಚು ನಮ್ಮಿಂದಲೇ ಎಲ್ಲವೂ ಎನ್ನುವರಿರುತ್ತಾರೆ. ನನ್ನ 70 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಸೀದಿಗೆ ಭೇಟಿ ಕೊಟ್ಟಿದ್ದೇನೆ. ನಾವು ವಿಗ್ರಹದ ಮುಂದೆ ಪ್ರಾರ್ಥನೆ ಸಲ್ಲಿಸುತ್ತೇವೆ. ಇಲ್ಲಿ ನಾಲ್ಕು ಗೋಡೆ ಮಧ್ಯೆ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವನೊಬ್ಬ ನಾಮ ಹಲವು ಎಂಬ ರೀತಿಯಲ್ಲಿ ಅವರ ಜನಾಂಗದಲ್ಲಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅಂತಹ ಇಲ್ಲಿಯೂ ನಡೆಯಿತು ಎಂದು ಹೆಚ್.ಕೆ. ಕೊಟ್ರಪ್ಪ ಹೇಳಿದರು.