ಬೆಂಗಳೂರು: ಪ್ರಕೃತಿ ವಿಕೋಪ, ಹವಾಮಾನ ವೈಪರೀತ್ಯ, ಜಾಗತಿಕ ತಾಪಮಾನ ಏರಿಕೆಯಂತಹ ಜಾಗತಿಕ ಸಮಸ್ಯೆಗೆ ಮಾಲಿನ್ಯ ಹೆಚ್ಚಳ, ಅರಣ್ಯ ನಾಶವೇ ಕಾರಣವಾಗಿದೆ. ಪ್ರಕೃತಿ, ಪರಿಸರ, ವನ, ವನ್ಯಜೀವಿ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ಸಲಹೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಅರಣ್ಯ ದಿನ (ಮಾ.21) ನಿಮಿತ್ತ ಸಂದೇಶ ನೀಡಿದ ಅವರು, ಈ ಬಾರಿಯ ಅರಣ್ಯ ದಿನದ ಧ್ಯೇಯವಾಕ್ಯ ಅರಣ್ಯ ಮತ್ತು ನಾವೀನ್ಯತೆ, ಉತ್ತಮ ವಿಶ್ವಕ್ಕಾಗಿ ಹೊಸ ಪರಿಹಾರಗಳು’ (Forests and innovation: New Solutions for a better world) ಎಂಬುದಾಗಿದೆ. ಪರಿಸರ, ಅರಣ್ಯ ಪ್ರದೇಶ, ಸಸ್ಯ ಸಂಕುಲ, ಪ್ರಾಣಿ ಸಂಕುಲ, ಪಕ್ಷಿ ಸಂಕುಲ ಹಾಗೂ ಜೀವವೈವಿಧ್ಯದ ಸಂರಕ್ಷಣೆಗೆ ಸಮರ್ಥವಾಗಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ನಾವೀನ್ಯ ಪೂರ್ಣ ವಿಧಾನಗಳ ಅಳವಡಿಕೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ತಿಳಿಸಿದರು.
ಅರಣ್ಯ ಒತ್ತುವರಿ:ಅರಣ್ಯ ಒತ್ತುವರಿ ಪತ್ತೆಯಲ್ಲಿ ಉಪಗ್ರಹ ಚಿತ್ರಗಳು ಮಹತ್ವದ ಪಾತ್ರ ವಹಿಸುತ್ತವೆ. ಹಿಂದಿನ 5-10 ವರ್ಷಗಳಲ್ಲಿ ಅರಣ್ಯ ಹೇಗಿತ್ತು, ಈಗ ಹೇಗಿದೆ ಎಂಬುದನ್ನು ಈ ಚಿತ್ರಗಳಿಂದ ತಿಳಿಯಲು ಸಾಧ್ಯವಾಗುತ್ತಿದೆ. ಅರಣ್ಯ ಪ್ರದೇಶಗಳಲ್ಲಿ ಉಪಗ್ರಹ ಚಿತ್ರಗಳನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದರೆ ಹೊಸ ಒತ್ತುವರಿ ತಡೆಯಲು ಸಾಧ್ಯ, ಈ ವಿಧಾನವನ್ನು ಅರಣ್ಯ ಇಲಾಖೆ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದಿದ್ದಾರೆ.