ರಾಯಚೂರು:ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಹಾರಥೋತ್ಸವ ಇಂದು ಅಪಾರ ಸಂಖ್ಯೆಯಲ್ಲಿ ಸೇರಿದ ಭಕ್ತರ ಹರ್ಷೋದ್ಘಾರಗಳ ನಡುವೆ ವಿಜೃಂಭಣೆಯಿಂದ ನೆರವೇರಿತು.
ಗುರು ರಾಘವೇಂದ್ರ ಸ್ವಾಮಿಗಳ 353ನೇ ಆರಾಧನಾ ಮಹೋತ್ಸವದ ಐದನೇ ದಿನ ಬೆಳಿಗ್ಗೆಯಿಂದ ವಿವಿಧ ಪೂಜೆ ಕೈಂಕರ್ಯಗಳು ನಡೆದವು. ರಥೋತ್ಸವಕ್ಕೆ ಮುನ್ನ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ವಸಂತಕ್ಕೆ ಚಾಲನೆ ಕೊಟ್ಟರು. ರಾಯರ ಮೂಲ ಬೃಂದಾವನ ಗುಲಾಲ್(ಬಣ್ಣ) ಸಮರ್ಪಿಸಿದರು. ನೆರೆದ ಭಕ್ತರಿಗೆ ಬಣ್ಣ ಎರಚುವ ಮೂಲಕ ವಸಂತವನ್ನು ಸಂಭ್ರಮ ಸಡಗರದಿಂದ ಆಚರಿಸಿದರು. ಇದಾದ ನಂತರ, ಪ್ರಹ್ಲಾದ್ ರಾಜ್ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ವಿವಿಧ ಪ್ರಕಾರಗಳ ವಾದ್ಯ ಮೇಳದೊಂದಿಗೆ ಪ್ರದಕ್ಷಿಣೆ ಮಾಡ, ಪೂಜೆ ಸಲ್ಲಿಸಲಾಯಿತು.
ಬಾಂಗ್ಲಾ ಹಿಂದೂಗಳ ಮೇಲೆ ದಾಳಿ ಖಂಡಿಸಿದ ಶ್ರೀಗಳು: ಸುಬುಧೇಂದ್ರ ತೀರ್ಥರು ಜಾತ್ರಾ ಮಹೋತ್ಸವಕ್ಕೆ ಆಗಮಿಸಿದ ಭಕ್ತರನ್ನು ಉದ್ದೇಶಿಸಿ ಮಾತನಾಡಿ, "ಜಾತಿ, ಮತ, ಬೇಧವಿಲ್ಲದೆ ದೇಶದಲ್ಲಿ ನಡೆಯುವ ಹಬ್ಬ ರಾಯರ ಆರಾಧನಾ ಮಹೋತ್ಸವ. ವಿಶ್ವಕ್ಕೆ ಕಲ್ಯಾಣವಾಗಲಿ, ಪ್ರಾಣಿ, ಸಸ್ಯ, ಮನುಕುಲಕ್ಕೆ ಒಳ್ಳೆಯದಾಗಲಿ. ಗಲಭೆಗಳು ಆಗದಂತೆ ಭಗವಂತ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸೋಣ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿಯಾಗಿದೆ, ಇದು ಅತ್ಯಂತ ಹೇಯವಾದದ್ದು, ಖಂಡಿಸೋಣ" ಎಂದರು.