ಬೆಂಗಳೂರು: ನಗರದ ಜನರ ಮಾನಸಿಕ ಖಿನ್ನತೆ, ಆರೋಗ್ಯ ಕಾಳಜಿ, ಔಷಧ ನಿರ್ವಹಣೆ ಸೇರಿದಂತೆ ಇತರೆ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞರು ಸಲಹೆ-ಸೂಚನೆಗಳನ್ನು ನೀಡುವ 'ಮನೋಬಿಂಬ' ಯೂಟ್ಯೂಬ್ ಚಾನಲ್ ಅನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ(ಬಿಬಿಎಂಪಿ) ಆರೋಗ್ಯ ವಿಭಾಗ ಆರಂಭಿಸಿದೆ.
ಜಯನಗರ 4ನೇ ಬ್ಲಾಕ್‌ನಲ್ಲಿರುವ ಪಾಲಿಕೆಯ ಸಂಕೀರ್ಣ ಕಟ್ಟಡದಲ್ಲಿ ಮನೋಬಿಂಬ ಸ್ಟುಡಿಯೋ ಅರಂಭವಾಗಿದೆ. ಸಿಲಿಕಾನ್ ಸಿಟಿಯ ವ್ಯಾಪ್ತಿಯ ಜನರ ಆರೋಗ್ಯ ರಕ್ಷಣೆ ಹಾಗೂ ವಾತಾವರಣದಲ್ಲಿನ ಏರುಪೇರಿನಿಂದ ಬರುವ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಚಿಕೂನ್ ಗುನ್ಯಾ, ವೈರಲ್ ಜ್ವರಗಳು, ಮಕ್ಕಳನ್ನು ಕಾಡುವ ಸಾಂಕ್ರಾಮಿಕ ರೋಗಗಳೂ ಸೇರಿದಂತೆ ಮಹಿಳೆಯರು, ಮಕ್ಕಳು, ವೃದ್ಧರ ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜನರಿಗೆ ಅಗತ್ಯ ಮಾಹಿತಿ ನೀಡುವುದು, ಆರೋಗ್ಯ ಸಮಸ್ಯೆ, ಮಾನಸಿಕ ಸಮಸ್ಯೆ ಬಗ್ಗೆ ಅರಿವು ಮೂಡಿಸುವ ಉದ್ದೇಶವನ್ನು ಬಿಬಿಎಂಪಿ ಹೊಂದಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಜನರ ಮನೆ ಮನೆಗೂ ತಲುಪುವ ಉದ್ದೇಶ ಹಾಗೂ ಅರಿವು ಮೂಡಿಸುವ ಸಲುವಾಗಿ 'ಮನೋಬಿಂಬ-ಬೆಂಗಳೂರಿಗರ ಮನದಾಳದ ಮಾತು' ಎಂಬ ಪಾಡ್ಕಾಸ್ಟ್ ಚಾನಲ್ ಅನ್ನು ಆರೋಗ್ಯ ಇಲಾಖೆ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್ ನೇತೃತ್ವದಲ್ಲಿ ಆರಂಭಿಸಿರುವುದು ಹೊಸ ಹೆಜ್ಜೆಯಾಗಿದೆ. ಈಗಾಗಲೇ ಈ ಚಾನೆಲ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
"ಇಲ್ಲಿ ಜನರು ಉಚಿತವಾಗಿ ತಜ್ಞರ ಸಲಹೆಗಳನ್ನು ಪಡೆಯಬಹುದು. ಪ್ರತೀ ವಾರ ಅಥವಾ ಎರಡು ವಾರಕ್ಕೊಮ್ಮೆ ಆರೋಗ್ಯಕ್ಕೆ ಸಂಬಂಧಪಟ್ಟ ಇಲಾಖೆಗಳ ತಜ್ಞರೊಂದಿಗೆ ಸಂವಾದ ಕೂಡ ನಡೆಸಲಾಗುತ್ತದೆ" ಎಂದು ಸುರಳ್ಕರ್ ವಿಕಾಸ್ ಕಿಶೋರ್ ಹೇಳಿದ್ದಾರೆ.