ಬೆಂಗಳೂರು: ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ನೀಡುವ ಅಂಶಗಳು ಭವಿಷ್ಯದಲ್ಲಿ ರಚನೆಯಾಗುವ ಸರ್ಕಾರದ ಭರವಸೆಗಳೇ ವಿನಃ ಅಭ್ಯರ್ಥಿಯ ವೈಯಕ್ತಿಕ ಭರವಸೆಗಳಲ್ಲ. ಪ್ರಣಾಳಿಕೆಯಲ್ಲಿನ ಭರವಸೆಗಳು ಚುನಾವಣಾ ಅಕ್ರಮ ಎಂದು ಪರಿಗಣಿಸಲಾಗದು ಎಂದು ಸಿದ್ದರಾಮಯ್ಯ ಪರ ವಕೀಲರು ಹೈಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಯ್ಕೆ ಅಸಿಂಧು ಎಂದು ಕೋರಿ ಕೂಡನಹಳ್ಳಿ ಗ್ರಾಮದ ಕೆ.ಶಂಕರ್ ಎಂಬವರು ಸಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ಪೀಠಕ್ಕೆ ವಕೀಲರು ವಿವರಿಸಿದರು. ವಿಚಾರಣೆ ವೇಳೆ ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಪ್ರಜಾ ಪ್ರತಿನಿಧಿ ಕಾಯಿದೆಯಲ್ಲಿ ಪಕ್ಷ ಮತ್ತು ಅಭ್ಯರ್ಥಿಯನ್ನು ಪ್ರತ್ಯೇಕಿಸಲಾಗಿದೆ. ಪಕ್ಷದ ಪ್ರಣಾಳಿಕೆಗೂ ಅಭ್ಯರ್ಥಿಗೂ ಸಂಬಂಧವಿರುವುದಿಲ್ಲ. ಪಕ್ಷದ ಘೋಷಣೆಗಳನ್ನು ಅಭ್ಯರ್ಥಿಯ ಘೋಷಣೆಗಳನ್ನಾಗಿ ಪರಿಗಣಿಸಲಾಗದು ಎಂದರು.
ರಾಜಕೀಯ ಪಕ್ಷಗಳು ಪ್ರಣಾಳಿಕೆ ಸಿದ್ದಪಡಿಸುವುದಕ್ಕೆ ಅಧಿಕಾರವಿದೆ ಎಂದು ಚುನಾವಣಾ ಆಯೋಗ ಹೇಳಿದೆ. ಅಲ್ಲದೆ, ಚುನಾವಣಾ ಪ್ರಣಾಳಿಕೆ ಭರವಸೆಗಳು ಭ್ರಷ್ಟಾಚಾರದ ಅಡಿಯಲ್ಲಿ ಬರುವುದಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಗ್ಯಾರೆಂಟಿ ಕಾರ್ಡ್‌ಗಳನ್ನು ವಿತರಣೆ ಸಂಬಂಧ ಪ್ರತಿವಾದಿ (ಸಿದ್ದರಾಮಯ್ಯ) ಭಾಗಿಯಾಗಿರುವ ಹಾಗೂ ಯಾರಿಗಾದರೂ ಆಮಿಷ ಹೊಡ್ಡಿರುವ ಉದಾಹರಣೆಗಳು ಇಲ್ಲ. ಬಡತನ ಮತ್ತು ನಿರುದ್ಯೋಗ ನಿವಾರಣೆ ಮಾಡುವುದಕ್ಕೆ ಸರ್ಕಾರ ಮುಂದಾಗುವುದಕ್ಕೆ ಸಂವಿಧಾನದಲ್ಲಿಯೂ ಅವಕಾಶ ಕಲ್ಪಿಸಲಾಗಿದೆ. ಮತದಾರರಿಗೆ ಸರ್ಕಾರದ ಭರವಸೆಗಳನ್ನು ನೀಡುವ ಮೂಲಕ ಅದನ್ನು ಈಡೇರಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ರವಿವರ್ಮ ಕುಮಾರ್ ವಿವರಿಸಿದರು.
ಅಲ್ಲದೆ, ಪ್ರಕರಣದಲ್ಲಿ ಪ್ರತಿವಾದಿಯಾಗಿರುವ ಸಿದ್ದರಾಮಯ್ಯ ಅವರ ಆಯ್ಕೆ ಆಸಿಂಧುಗೊಳಿಸಬೇಕು ಎಂಬುದಾಗಿ ಅರ್ಜಿದಾರರ ಕೋರಿದ್ದಾರೆ. ಆದರೆ, ಯಾವ ಕಾರಣಕ್ಕಾಗಿ ಅಸಿಂಧುಗೊಳಿಸಬೇಕು ಎಂದು ಉಲ್ಲೇಖಿಸಿಲ್ಲ. ಕೆಲ ಪ್ರಸ್ತುತವಲ್ಲದ ಹಾಗೂ ಅಸ್ತಿತ್ವದಲ್ಲಿದ್ದ ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಅರ್ಜಿದಾರರ ವಿರುದ್ಧ ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷ್ಯಾಧಾರಗಳನ್ನು ಪ್ರಸ್ತಾಪಿಸಿಲ್ಲ. ಆದ್ದರಿಂದ ಈ ಅರ್ಜಿ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದ್ದು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಕೋರಿದರು.
ಇಡೀ ಅರ್ಜಿ ನಕಲು:ಸಿದ್ದರಾಮಯ್ಯ ಅವರನ್ನು ಅಸಿಂಧು ಕೋರಿ ಸಲ್ಲಿಸಿರುವ ಇಡೀ ಅರ್ಜಿಯನ್ನು ಪರಿಶೀಲಿಸಲಾಗಿದೆ. ಇಡೀ ಅರ್ಜಿಯನ್ನು ಮತ್ತೊಂದು ಅರ್ಜಿಯಿಂದ (ರಿಜ್ವಾನ್ ಅರ್ಷದ್, ಪ್ರಿಯಾಂಕ್ ಖರ್ಗೆ ಅಸಿಂಧು ಕೋರಿರುವ ಅರ್ಜಿಗಳು) ಸಂಪೂರ್ಣ ನಕಲು ಮಾಡಲಾಗಿದೆ. ಚುನಾವಣಾ ತಕರಾರು ಅರ್ಜಿಗಳು ನಕಲು ಮಾಡುವಂತಹ ಅರ್ಜಿಗಳಲ್ಲ. ಅದನ್ನು ಗಂಭೀರವಾಗಿ ಸಿದ್ದತೆ ಮಾಡಬೇಕು. ಮತ್ತೊಂದು ಅರ್ಜಿಯಲ್ಲಿರುವ ಅಲ್ಪ ವಿರಾಮ, ಪೂರ್ಣವಿರಾಮ ಮತ್ತು ವ್ಯಾಕರಣ ದೋಷಗಳು ಈ ಅರ್ಜಿಯಲ್ಲಿಯೂ ಯಥಾವತ್ತಾಗಿದೆ ಎಂದು ಹೇಳಿದರು.