ಮಂಗಳೂರು: ಮಂಗಳೂರು ಸಿಸಿಬಿ ಪೊಲೀಸರು ಸತತ ಕಾರ್ಯಾಚರಣೆ ಮೂಲಕ ಸುಮಾರು 30 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕೊಲೆ ಪ್ರಕರಣದ ಆರೋಪಿಯೊಬ್ಬನನ್ನು ಬಂಧಿಸಿದ್ದಾರೆ. ಜೋಸ್ ಕುಟ್ಟಿ (60) ಬಂಧಿತ. ಈತ ಕೇರಳದ ಎರ್ನಾಕುಳಂ ಜಿಲ್ಲೆಯ ತ್ರಿಪ್ಪುಳಿತ್ತುರಂ ಎಂಬಲ್ಲಿ ತಲೆಮರೆಸಿಕೊಂಡಿದ್ದ. ಈ ಆರೋಪಿ 1995 ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೊಲೆ ಹಾಗೂ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ.
ಪ್ರಕರಣದ ವಿವರ:1995ರಲ್ಲಿ, ಸುರತ್ಕಲ್ ಠಾಣಾ ವ್ಯಾಪ್ತಿಯ ಭಾಳ ಗ್ರಾಮದಲ್ಲಿರುವ ಎಂಆರ್‌ಪಿಎಲ್ ಟೌನ್ ಶಿಪ್ ಸೈಟ್ನಲ್ಲಿ ರಕ್ಷಕ್ ಇಂಡಸ್ಟ್ರೀಯಲ್ ಸೆಕ್ಯೂರಿಟಿ ಇನ್ಸಿಟ್ಯೂಟ್ ಮಾಲೀಕರಾದ ಅಬ್ದುಲ್ಲಾ ಅವರು ನೇಮಿಸಿದ್ದ 5 ಮಂದಿ ಸೆಕ್ಯೂರಿಟಿ ಗಾರ್ಡುಗಳಲ್ಲಿ ನಾರಾಯಣ, ಸುರೇಶ್, ದೇವಣ್ಣ ಎಂಬವರು ಕಾರ್ಯನಿರ್ವಹಿಸುತ್ತಿದ್ದರು. 1995ರ ಮಾರ್ಚ್ 12 ರಂದು ರಾತ್ರಿ 10:30ರ ಸುಮಾರಿಗೆ ಮೂರು ಅಪರಿಚಿತರು ಆ ಪ್ರದೇಶಕ್ಕೆ ಆಗಮಿಸಿದಾಗ, ಈ ಸಮಯದಲ್ಲಿ ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಕೇಳಿದ ಸಮಯದಲ್ಲಿ ಜಗಳ ನಡೆದಿದೆ. ಈ ಜಗಳದ ವೇಳೆ, ಅಪರಿಚಿತರು ನಾರಾಯಣ್ ಅವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದರು.
ಪ್ರಕರಣದಲ್ಲಿ ಭಾಗಿಯಾಗಿದ್ದ ಅಚ್ಚನ್ ಕುಂಞ, ಜೋಸ್ ಕುಟ್ಟಿ, ಮತ್ತು ಇತರ ಆರೋಪಿಗಳು ಕೃತ್ಯ ಮಾಡಿದ ನಂತರ ತಲೆಮರೆಸಿಕೊಂಡಿದ್ದರು. 30 ವರ್ಷಗಳ ಕಾಲ ಈ ಪ್ರಕರಣದ ಆರೋಪಿಗಳನ್ನು ಹುಡುಕಲು ಪೋಲಿಸರು ನೂರಾರು ಪ್ರಯತ್ನ ಮಾಡಿದರೂ ಯಶಸ್ವಿಯಾಗಿರಲಿಲ್ಲ.